

ಬೆಂಗಳೂರು: ಮುಖ್ಯಮಂತ್ರಿ ಆಗಿದ್ದಾಗಲೂ ಅಷ್ಟೇ. ಆ ನಂತರವೂ ಅಷ್ಟೇ. ಸಿದ್ಧರಾಮಯ್ಯ ಸಿನಿಮಾ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ, ಸಾ.ರಾ. ಗೋವಿಂದು ನಿರ್ವಣದ ‘ಬೆಳ್ಳಿ ಕಾಲುಂಗುರ’ ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿ, ಮೊದಲ ಶಾಟ್ಗೆ ಕ್ಲಾಪ್ ಮಾಡಿದ್ದರು. ಈಗ ಅವರು ಮಂಗಳವಾರ ರಾತ್ರಿ ಒರಾಯನ್ ಮಾಲ್ನಲ್ಲಿ ಸದ್ದಿಲ್ಲದೆ ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಚಿತ್ರವನ್ನು ವೀಕ್ಷಿಸಿದ್ದಾರೆ.
‘ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಕಲೆ ಉಳಿಯಬೇಕು, ಅದನ್ನು ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ಮಾಡಿದ್ದಾರೆ. ಕಲೆಗೆ ಜಾತಿ, ಧರ್ಮ, ಲಿಂಗಭೇದ ಯಾವುದೂ ಇರುವುದಿಲ್ಲ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ವಿುಸಿದ ಈ ತಂಡಕ್ಕೆ ನನ್ನ ಹಾರೈಕೆಗಳು. ಇಂತಹ ಸಿನಿಮಾಗಳು ಬರಬೇಕು’ ಎಂದು ಹಾರೈಸಿದರು. ‘ಡೊಳ್ಳು’ ನೋಡುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಚಿತ್ರತಂಡ ಆಮಂತ್ರಣ ನೀಡಿದ್ದು, ಶೀಘ್ರದಲ್ಲೇ ರಾಜ್ಯಪಾಲರು ಸಹ ಸಿನಿಮಾ ವೀಕ್ಷಿಸುವ ಸಾಧ್ಯತೆ ಇದೆ. ‘ಡೊಳ್ಳು’ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದವರು ನಟಿಸಿದ್ದಾರೆ. ಶ್ರೀನಿಧಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ.
ವಿಶೇಷ ಅಂದರೆ ‘ಡೊಳ್ಳು’ ಚಿತ್ರದ ಈ ಹಾಡನ್ನು ನಟ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಂದ ಬಿಡುಗಡೆ ಮಾಡಿಸಲಾಯಿತು. ಬಳಿಕ ಮಾತನಾಡಿದ ನಿರ್ವಪಕಿ ಅಪೇಕ್ಷಾ ಪುರೋಹಿತ್, ‘ಜನರಿಗೆ ಈ ರೀತಿಯ ಸಿನಿಮಾ ತೋರಿಸಬೇಕು ಎಂಬ ಪ್ರಯತ್ನದೊಂದಿಗೆ ರಿಸ್ಕ್ ತೆಗೆದುಕೊಂಡೇ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಯಾಕೆ ರಾಷ್ಟ್ರಪ್ರಶಸ್ತಿ ಬಂತು ಎಂದು ತಿಳಿದುಕೊಳ್ಳುವುದಕ್ಕಾದರೂ ಈ ಚಿತ್ರ ನೋಡಿ. ಹೊಸ ಪ್ರತಿಭೆಗಳು ಸಿನಿಮಾ ಮಾಡಿದಾಗ ಹೇಗಿರುತ್ತೆ ಎಂಬುದು ಗೊತ್ತಾಗುತ್ತೆ. ಪುನೀತ್ ಅವರ ಎರಡು ಚಿತ್ರಗಳನ್ನು ಪವನ್ ನಿರ್ದೇಶನ ಮಾಡಿರುವಂತೆಯೇ, ನನ್ನ ಮೂರು ಚಿತ್ರಗಳ ಹಾಡುಗಳನ್ನು ಅವರು ಬಿಡುಗಡೆ ಮಾಡಿಕೊಟ್ಟಿದ್ದರು. ‘ಡೊಳ್ಳು’ ಚಿತ್ರ ಪ್ರಾರಂಭಿಸಿದ್ದೇ ಅವರ ಆಶೀರ್ವಾದದಿಂದ. ಪುನೀತ್ ಅವರ ಅಭಿಮಾನಿಗಳಿಂದ ಹಾಡನ್ನು ಬಿಡುಗಡೆ ಮಾಡಿಸಿದ ಖುಷಿಯಿದೆ. ಅಪು್ಪ ಸರ್ ನಮ್ಮ ಜತೆಯಲ್ಲೇ ಇದ್ದಾರೆ’ ಎಂದರು.
ಕಳೆದ ಕೆಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿರುವ ‘ಡೊಳ್ಳು’ ಚಿತ್ರತಂಡ ಬುಧವಾರ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿತು. ‘ಶಾಶ್ವತ ಯಾವುದು, ಎಲ್ಲಕೂ ಕೊನೆ ಇರುವುದು. ಸಾಧ್ಯವೂ, ಅಸಾಧ್ಯವೂ ಏತಕೆ ಹತಾಶೆಯೂ...’ ಎಂದು ಸಾಗುವ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಖುದ್ದು ನಿರ್ವಪಕ ಪವನ್ ಒಡೆಯರ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಒಡೆಯರ್, ‘ಕೆಲವು ಚಿತ್ರಮಂದಿರದ ಮಾಲೀಕರು ತಾವೇ ಖುದ್ದಾಗಿ ಕರೆ ಮಾಡಿ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರುವುದು ಖುಷಿ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.