ಹೊಸ ಅಧ್ಯಾಯ ಬರೆಯುತ್ತಾ ರಾಧೆ?; ವರ್ಕೌಟ್ ಆಗುತ್ತಾ ಸಲ್ಮಾನ್ ಪ್ಲಾನ್...

Salman
Published on

ಸಲ್ಮಾನ್ ಖಾನ್ ಅಭಿನಯದ ‘ರಾಧೇ; ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಸಜ್ಜಾಗಿದೆ. ಚಿತ್ರವು ಮೇ 13ರಂದು ದುಬೈ ಮುಂತಾದ ದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಜೀ5 ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲೂ ಮೂಡಿಬರಲಿದೆ. ಡಿಶ್, ಡಿ2ಎಚ್, ಟಾಟಾಸ್ಕೈ, ಏರ್​ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್​ಗಳಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಫ್ರೀ ಅಲ್ಲ ದುಡ್ಡು ಕೊಟ್ಟು ಎಂಬುದು ಗೊತ್ತಿರಲಿ! ಪ್ರತಿ ವೀಕ್ಷಣೆಗೆ 249 ರೂ.ಗಳನ್ನು ಕೊಟ್ಟು ಓಟಿಟಿ ಅಥವಾ ಡಿಟಿಎಚ್​ನಲ್ಲಿ ಚಿತ್ರವನ್ನು ಮನೆಯಲ್ಲಿ ಕುಳಿತೇ ನೋಡಬಹುದು. ಈ ಪ್ರಯೋಗವೇನಾದರೂ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಪ್ರತಿ ವೀಕ್ಷಣೆಗೆ ಇಂತಿಷ್ಟು ಎಂದು ನಿಗದಿಪಡಿಸಿ, ಓಟಿಟಿ ಮತ್ತು ಡಿಟಿಎಚ್ ಮೂಲಕ ಚಿತ್ರ ಬಿಡುಗಡೆ ಮಾಡುವ ಸಂಪ್ರದಾಯ ಹೆಚ್ಚಾಗಬಹುದು.

ಇಂಥದ್ದೊಂದು ಪ್ರಯತ್ನ ಹೊಸದೇನಲ್ಲ. ಎಂಟು ವರ್ಷಗಳ ಹಿಂದೆಯೇ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದರು ಹಿರಿಯ ನಟ- ನಿರ್ದೇಶಕ ಕಮಲ್ ಹಾಸನ್. ಆಗಿನ್ನೂ ಓಟಿಟಿಗಳು ಇಷ್ಟು ಸುದ್ದಿಯಲ್ಲಿರಲಿಲ್ಲ. ಅವರು ತಮ್ಮ ‘ವಿಶ್ವರೂಪಂ’ ಚಿತ್ರವನ್ನು ಚಿತ್ರಮಂದಿರಗಳ ಜತೆಗೆ ಡಿಟಿಎಚ್ ಮೂಲಕವೂ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಪ್ರತಿ ವೀಕ್ಷಣೆಗೆ ಇಂತಿಷ್ಟು ಎಂದು ದರ ನಿಗದಿ ಮಾಡಿದ್ದರು. ಹೀಗೆ ಡಿಟಿಎಚ್​ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ, ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪ್ರದರ್ಶಕರು ತಗಾದೆ ತೆಗೆದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಹಿಂಪಡೆದಿದ್ದರು. ಆ ನಂತರ ಒಂದೆರೆಡು ಚಿತ್ರಗಳು ಈ ಪ್ರಯತ್ನ ಮಾಡಿದರಾದರೂ, ಅಷ್ಟು ಯಶಸ್ವಿಯಾಗಲಿಲ್ಲ. ಈಗ ಸಲ್ಮಾನ್ ಖಾನ್ ತಮ್ಮ ‘ರಾಧೆ’ ಚಿತ್ರವನ್ನು ಆನ್​ಲೈನ್ ಮತ್ತು ಡಿಟಿಎಚ್​ನಲ್ಲಿ ಪೇ ಪರ್ ವ್ಯೂ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಹಲವರಲ್ಲಿ ಕುತೂಹಲ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ಒಂದು ಪಕ್ಷ ಹೆಚ್ಚು ಜನ ಡಿಟಿಎಚ್ ಮೂಲಕ ಚಿತ್ರ ನೋಡಿ ಈ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಹೊಸ ಚಿತ್ರಗಳು ಇದೇ ರೀತಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಓಟಿಟಿಗಳಲ್ಲಿ ಸಿನಿಮಾ ಹಬ್ಬ: ಕನ್ನಡದ ‘ಯುವರತ್ನ’ ಮತ್ತು ‘ರಾಬರ್ಟ್’ ಚಿತ್ರಗಳು ಅಮೆಜಾನ್ ಪ್ರೖೆಂನಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಪವನ್ ಕಲ್ಯಾಣ್ ‘ವಕೀಲ್ ಸಾಬ್’, ‘ಸುಲ್ತಾನ್’, ‘ಸೈನಾ’ ಮುಂತಾದ ಚಿತ್ರಗಳು ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದವು. ಇದೀಗ ಈ ಚಿತ್ರಗಳು ಓಟಿಟಿಯಲ್ಲಿ ಲಭ್ಯವಿವೆ. ಅದೇ ರೀತಿ ಮಮ್ಮೂಟ್ಟಿ ಅಭಿನಯಿಸಿರುವ ಮಲಯಾಳಂ ಚಿತ್ರ ‘ಒನ್’ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದೆ. ನಾಗಾರ್ಜುನ ಅವರ ‘ವೈಲ್ಡ್ ಡಾಗ್’ ಚಿತ್ರ ಮತ್ತು ಧನುಷ್ ‘ಜಗಮೇ ತಂಧಿರಮ್ ತಮಿಳು ಚಿತ್ರವನ್ನೂ ಸಹ ನೆಟ್​ಫ್ಲಿಕ್ಸ್ ನಲ್ಲಿ ನೋಡಬಹುದು. ಇದು ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳಾದರೆ, ಬಿಡುಗಡೆಯಾಗಬೇಕಿರುವ ಚಿತ್ರಗಳ ಪಟ್ಟಿ ಸಹ ದೊಡ್ಡದಿದೆ. ಅರ್ಜುನ್ ಕಪೂರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಹಿಂದಿ ಚಿತ್ರ ‘ಸರ್ದಾರ್ ಕಾ ಗ್ರ್ಯಾಂಡ್​ಸನ್’, ನಿತಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ತೆಲುಗು ಚಿತ್ರ ‘ರಂಗ್​ದೇ’, ಧನುಷ್ ಅಭಿನಯದ ತಮಿಳು ಚಿತ್ರ ‘ಕರ್ಣನ್’ ಸಹ ವಿವಿಧ ಓಟಿಟಿಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net