ರಾಜಕೀಯಕ್ಕೆ ಬರುತ್ತಾರಾ ನಟಿ ತ್ರಿಷಾ?

Thrisha
Published on

ಅದ್ಯಾರು ಶುರು ಮಾಡಿದರೋ, ಯಾಕೆ ಇಂಥದ್ದೊಂದು ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಕೆಲವು ದಿನಗಳಿಂದ ಕಾಲಿವುಡ್ ನಟಿ ತ್ರಿಷಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಂತೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಕಾಂಗ್ರೆಸ್ ಸೇರಿ ರಾಜಕಾರಣ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತ್ರಿಷಾ ಅಭಿನಯದ ‘ಪೊನ್ನಿಯಿನ್ ಸೆಲ್ವನ್’, ‘ಸದುರಂಗ ವೆಟೈ 2’ ಮುಂತಾದ ಚಿತ್ರಗಳು ಮುಗಿದಿವೆ. ಇನ್ನೊಂದಿಷ್ಟು ಚಿತ್ರಗಳ ಕೆಲಸಗಳು ನಡೆಯುತ್ತಿವೆ.

ಇಷ್ಟೆಲ್ಲ ಆಗುತ್ತಿರುವಾಗ, ತ್ರಿಷಾಗೆ ಯಾಕಪ್ಪಾ ರಾಜಕೀಯ ಸೇರುವ ಬಯಕೆ? ಸೇರಿದರೂ ಆಕೆಯಿಂದ ನಿಭಾಯಿಸೋಕೆ ಸಾಧ್ಯವಾ? ನಿಭಾಯಿಸಿದರೂ ಆ ಕ್ಷೇತ್ರದಲ್ಲಿ ಹೆಚ್ಚು ಕಾಲ ಉಳಿಯುವುದಕ್ಕೆ ಸಾಧ್ಯವಾ? ಎಂಬ ಪ್ರಶ್ನೆಗಳನ್ನು ಮಾಧ್ಯಮದವರು ಕೇಳುವುದಿರಲಿ, ಜನಸಾಮಾನ್ಯರು ಸಹ ಕೇಳುವುದಕ್ಕೆ ಪ್ರಾರಂಭಿಸಿದರು. ಯಾವಾಗ, ಈ ಪ್ರಶ್ನೆಗಳು ಹೆಚ್ಚಾದವೋ, ಆಗ ಖುದ್ದು ತ್ರಿಷಾ ತಮಗೆ ರಾಜಕೀಯ ಸೇರುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮಗೆ ರಾಜಕೀಯದ ಎಬಿಸಿಡಿ ಗೊತ್ತಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಈ ತರಹದ ಸುದ್ದಿಗಳನ್ನು ಯಾರು, ಯಾಕೆ ಹಬ್ಬಿಸುತ್ತಾರೆ ಎಂಬುದೇ ಅರ್ಥವಾಗತ್ತಿಲ್ಲ ಎಂದು ಹೇಳಿದ್ದಾರೆ. ಮಾತು ಮುಗಿಸುವ ಮುನ್ನ, ‘ನನಗೆ ರಾಜಕೀಯ ಸೇರುವ ಯಾವುದೇ ಯೋಚನೆ ಇಲ್ಲ. ಈಗಲೂ ಇಲ್ಲ, ಮುಂದೂ ಇಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net