

ಹೈದರಾಬಾದ್: ಟಾಲಿವುಡ್ ಜನಪ್ರಿಯ ನಾಯಕಿಯರಲ್ಲಿ ನಿವೇತಾ ಥಾಮಸ್ ಕೂಡ ಒಬ್ಬರು. ಗ್ಲಾಮರ್ನಿಂದ ದೂರವಿರುವ ಮತ್ತು ನಟನೆಗೆ ಹೆಚ್ಚು ಸ್ಕೋಪ್ ಇರುವ ಪಾತ್ರಗಳಿಗೆ ಆದ್ಯತೆ ನೀಡುತ್ತಾರೆ. ನಿನ್ನು ಕೋರಿ, ಬ್ರೋಚೇವರೆವರೂರ, ಜೈ ಲವಕುಶ ಮತ್ತು ವಕೀಲ್ ಸಾಬ್ ಸಿನಿಮಾಗಳ ಮೂಲಕ ತೆಲುಗು ಜನರ ಹೃದಯದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿದ್ದಾರೆ. ತಮ್ಮ ಸೂಕ್ಷ್ಮ ಅಭಿವ್ಯಕ್ತಿಗಳಿಂದ ಚಿತ್ರಪ್ರೇಮಿಗಳ ನೆಚ್ಚಿನ ನಟಿ ಎನಿಸಿಕೊಂಡಿದ್ದಾರೆ. ಆದರೆ, ಇತರ ನಾಯಕಿಯರಿಗಿಂತ ಭಿನ್ನವಾಗಿ ಹಾಗೂ ಸೆಲೆಕ್ಟಿವ್ ಆಗಿ ಚಿತ್ರಗಳನ್ನು ಮಾಡುತ್ತಾರೆ. ಇಷ್ಟಪಡುವ ಸಿನಿಮಾಗಳಲ್ಲಿ ಮಾತ್ರ ನಿವೇತಾ ನಟಿಸುತ್ತಾರೆ.
ನಿವೇತಾ ಥಾಮಸ್ ಅವರಿಂದ ಮತ್ತೊಂದು ವಿಭಿನ್ನ ಸಿನಿಮಾ ಬರುತ್ತಿದೆ. ಆಕೆ ಪ್ರಮುಖ ಪಾತ್ರದಲ್ಲಿ ನಟಿಸಿರುವ '35 ಚಿನ್ನ ಕಥಾ ಕಾದು' ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತಿರುಪತಿಯ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾಯಿ ಪಾತ್ರದಲ್ಲಿ ನಿವೇತಾ ನಟಿಸಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂದು ತಂದೆ ಛೀಮಾರಿ ಹಾಕಿದ ನಂತರ ಮಗ ಮನೆ ಬಿಟ್ಟು ಹೋಗುತ್ತಾನೆ. ತಾಯಿ ಮಗುವಿಗಾಗಿ ಹಂಬಲಿಸುವ ದೃಶ್ಯಗಳು ಟೀಸರ್ ಅನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿವೇತಾ ಥಾಮಸ್ ಆಸಕ್ತಿಕರ ಕಾಮೆಂಟ್ಸ್ ಮಾಡಿದ್ದಾರೆ. ಬಾಡಿ ಶೇಮಿಂಗ್ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಖಡಕ್ ಉತ್ತರ ನೀಡಿದ್ದಾರೆ.
ಅನುಷ್ಕಾ ಶೆಟ್ಟಿ ಅಥವಾ ನಿಮ್ಮಂತಹ ಅನೇಕ ಕಲಾವಿದರ ವಿಷಯದಲ್ಲಿ ಬಾಡಿ ಶೇಮಿಂಗ್ ಚರ್ಚೆಯ ವಿಷಯವಾಗಿದೆ. ಹೀರೋಯಿನ್ಸ್ ಅಂದರೆ ಝೀರೋ ಸೈಜ್ ಅನ್ನೋ ಕಲ್ಪನೆ ಇದೆ. ಸಾಮಾಜಿಕ ಜಾಲತಾಣದಲ್ಲೂ ಇದೇ ವೈರಲ್ ಆಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸುತ್ತಾರೆ.
ಪ್ರಶ್ನೆಗೆ ಉತ್ತರಿಸುವ ನಿವೇತಾ, ಈ ಸೋಶಿಯಲ್ ಮೀಡಿಯಾ ವೈರಲ್ ಅನ್ನೋದು ನಿಮಗೆ ಮಾತ್ರ ಬರುತ್ತಾ? ನನಗೆಲ್ಲ ಅದು ಗೊತ್ತೇ ಇಲ್ಲ. ನಿಮ್ಮ ಪ್ರಶ್ನೆಗೆ ನನ್ನ ಸರಳ ಉತ್ತರ ಏನೆಂದರೆ, 35 ಅನ್ನೋದು ಈ ಸಿನಿಮಾ ಸೆಟ್ನಲ್ಲಿರುವ ಯಾರ ತೂಕವೂ ಅಲ್ಲ, ಪಾತ್ರವರ್ಗದವರ ತೂಕವಲ್ಲ ಮತ್ತು ತಂತ್ರಜ್ಞರ ತೂಕವಲ್ಲ ಎಂದು ನಿವೇತಾ ಹೇಳಿದರು. ಈ ಮೂಲಕ ಈ ಸಿನಿಮಾಗೂ ತೂಕಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.
ನಿವೇತಾ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ನಿವೇತಾ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. 35 ಚಿನ್ನ ಕಥಾ ಕಾದು ಚಿತ್ರಕ್ಕೂ ತೂಕಕ್ಕೂ ಸಂಬಂಧವಿಲ್ಲ. ಪಾತ್ರಕ್ಕೆ ಏನು ಬೇಕೋ ಅದನ್ನು ನಿವೇತಾ ಮಾಡುತ್ತಿದ್ದಾರೆ ಎಂದು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್)