ಒಟಿಟಿಯಲ್ಲಿ ದೊಡ್ಡರಂಗೇಗೌಡರ ಹಾರುವ ಹಂಸಗಳು

Dodrange Gowda
Published on

ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡ ಅವರ ಚೊಚ್ಚಲ ನಿರ್ದೇಶನದ ‘ಹಾರುವ ಹಂಸಗಳು’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ‘ನಮ್ಮ ಫ್ಲಿಕ್ಸ್’ ಒಟಿಟಿ ವೇದಿಕೆಯಲ್ಲಿ ಗುರುವಾರ ಬಿಡುಗಡೆ ಆಗಿದೆ. ಚಿತ್ರ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಂಡ ದೊಡ್ಡರಂಗೇಗೌಡ್ರು, ‘ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಚಿತ್ರವಿದು. ಮಕ್ಕಳ ಮೇಲೆ ಮೊಬೈಲ್ ಫೋನ್ ಬೀರಿರುವ ಪರಿಣಾಮವೇನು? ಅದು ಅವರ ಭವಿಷ್ಯತ್ತಿಗೆಷ್ಟು ಮಾರಕ ಎಂಬುದನ್ನು ‘ಹಾರುವ ಹಂಸಗಳು’ ಚಿತ್ರದಲ್ಲಿ ಹೇಳಿದ್ದೇವೆ.

ಸಿನಿಮಾಕ್ಕೂ ಮೊದಲು ಈ ಎಲ್ಲ ವಿಚಾರಗಳನ್ನು ಸ್ನೇಹಿತರ ಮುಂದೆ ಹೇಳಿಕೊಂಡಿದ್ದೆ. ಆ ಬಗ್ಗೆ ಬರೆಯುವಂತೆ ಅವರೆಲ್ಲರೂ ಸಲಹೆ ನೀಡಿದ್ದರಿಂದ ನಾಟಕ ಬರೆದೆ. ಆಮೇಲೆ ನಿರ್ಮಾಪಕ ವಾಸುಪ್ರಸಾದ್ ನಾಟಕವನ್ನು ಸಿನಿಮಾ ಮಾಡಲು ಮುಂದೆ ಬಂದರು. ಅವರ ಒತ್ತಾಯಕ್ಕೆ ಮಣಿದು ಎಪ್ಪತ್ತೈದನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ. ಇದೀಗ ಅದು ಬಿಡುಗಡೆ ಆಗುತ್ತಿದೆ’ ಎಂದರು. ಅಂದಹಾಗೆ ಚಿತ್ರದಿಂದ ಬಂದ ಎಲ್ಲ ಮೊತ್ತವನ್ನು ನಿರ್ವಪಕರಿಗೆ ನೀಡಲು ಒಟಿಟಿ ಸಂಸ್ಥೆ ಮುಂದೆ ಬಂದಿದೆ. ಆ ಹಣವನ್ನು ಕರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ಶಿಕ್ಷಕರಿಗೆ ಸಹಾಯ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net