ಒಟಿಟಿಯಲ್ಲಿ 'ಬಾಳೇ ಬಂಗಾರ' ... ಭಾರತಿ ಚಿತ್ರಜೀವನವೀಗ ಸಾಕ್ಷ್ಯಚಿತ್ರ

Bharathi Vishnuvardhan - Final
Published on

ಬೆಂಗಳೂರು: ಹಿರಿಯ ನಟಿ ಮತ್ತು ಪದ್ಮಶ್ರೀ ಪುರಸ್ಕೃತೆ ಭಾರತಿ ವಿಷ್ಣುವರ್ಧನ್ ಕುರಿತು ಅವರ ಅಳಿಯ ಮತ್ತು ನಟ ಅನಿರುದ್ಧ್, ‘ಬಾಳೇ ಬಂಗಾರ’ ಎಂಬ ಸಾಕ್ಷ್ಯಚಿತ್ರವನ್ನು ಮಾಡಿರುವುದು ಗೊತ್ತೇ ಇದೆ. ಇತ್ತೀಚೆಗೆ ಆ ಸಾಕ್ಷ್ಯಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ ಹಿರಿಯ ನಿರ್ದೇಶಕ ಭಾರ್ಗವ, ನಾಗತಿಹಳ್ಳಿ ಚಂದ್ರಶೇಖರ್, ನಾಗಣ್ಣ, ಹೇಮಾ ಚೌಧರಿ, ಕವಿತಾ ಲಂಕೇಶ್, ಪದ್ಮಜಾ ರಾವ್, ಸುಧಾರಾಣಿ, ಶ್ರುತಿ ಸೇರಿದಂತೆ ಹಲವರು ಭಾಗವಹಿಸಿ, ಭಾರತಿ ಅವರಿಗೆ ಶುಭ ಹಾರೈಸಿದರು.

ಅನಿರುದ್ಧ್ಗೆ ಈ ಸಾಕ್ಷ್ಯಚಿತ್ರವನ್ನು ಯಾಕೆ ಮಾಡಬೇಕೆಂದನಿಸಿತು ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಮಾತನಾಡಿರುವ ಅವರು, ‘ಭಾರತಿ ಅವರ ಅಭಿಮಾನಿಯೊಬ್ಬರು, ಅವರನ್ನು ವಿಷ್ಣುವರ್ಧನ್ ಅವರ ಪತ್ನಿ ಎಂದು ಪರಿಚಯ ಮಾಡಿಕೊಟ್ಟರು. ಅದನ್ನು ಕೇಳಿದಾಗ, ಇದು ಭಾರತಿ ಅವರ ಪರಿಪೂರ್ಣವಾದ ಪರಿಚಯ ಅಲ್ಲ ಎಂದನಿಸಿತು. ಏಕೆಂದರೆ, ಅವರು ಆರು ಭಾಷೆಗಳಲ್ಲಿ ನಟಿಸಿದವರು. ಎಂಟು ವರ್ಷಗಳಲ್ಲಿ 100 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ವಿಷ್ಣುವರ್ಧನ್ ಅವರ ಮದುವೆಯಾಗುವುದಕ್ಕಿಂತ ಮುನ್ನವೇ ಸೂಪರ್‌ಸ್ಟಾರ್ ಆಗಿದ್ದರು. ಅವರ ಪರಿಚಯ ಜನರಿಗೆ ಆಗಬೇಕು. ಅವರ ಪ್ರತಿಯೊಂದು ಹಂತ, ಆಯಾಮ ಎಲ್ಲ ಪೀಳಿಗೆಗಳಿಗೂ ಗೊತ್ತಾಗಬೇಕು. ಅದು ದಾಖಲೆಯಾಗಿ ಉಳಿಯಬೇಕು ಎಂಬ ಕಾರಣಕ್ಕೆ ಈ ಸಾಕ್ಷ್ಯಚಿತ್ರ ಮಾಡಿದೆ’ ಎಂದು ಅನಿರುದ್ಧ್ ಹೇಳಿದ್ದಾರೆ.

ಇನ್ನು, ಭಾರತಿ ಅವರು ಮಾತನಾಡಿ, ‘ಅನಿರುದ್ಧ್ ನನ್ನ ಬಗ್ಗೆ ಚಿತ್ರ ಮಾಡ್ತೀನಿ ಎಂದಾಗ ಬೇಡ ಅಂತ ಹೇಳೋದಕ್ಕೆ ಆಗಲಿಲ್ಲ. ಹಾಗಾಗಿ, ನನಗೆ ಗೊತ್ತಿರುವುದನ್ನೆಲ್ಲ ಹೇಳಿದೆ. ನಾನು ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ವಿಷ್ಣುವರ್ಧನ್ ಬಗ್ಗೆ ಸಾಕ್ಷ್ಯಚಿತ್ರ ಆಗಬೇಕಿತ್ತು. ಅವರು ಇದ್ದಿದ್ದರೆ ಅನಿರುದ್ಧ್ ಖಂಡಿತಾ ಮಾಡಿರುತ್ತಿದ್ದರು’ ಎಂದು ಹೇಳಿಕೊಂಡರು.

‘ಬಾಳೇ ಬಂಗಾರ’ ಸದ್ಯದಲ್ಲೇ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net