

ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ, ಬಹುಭಾಷಾ ತಾರೆ, ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನಗಾಥೆ 'ಬಾಳೆ ಬಂಗಾರ' ಆಗಿ ಹೊರಹೊಮ್ಮಲಿದೆ. ಅರ್ಥಾತ್ ಅವರ ಅಳಿಯ, ನಟ ಅನಿರುದ್ಧ್ ಅವರು ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯಚಿತ್ರವೊಂದನ್ನು ತರಲಿದ್ದು, ಅದಕ್ಕೆ 'ಬಾಳೆ ಬಂಗಾರ' ಎಂಬ ಶೀರ್ಷಿಕೆ ಇರಿಸಿದ್ದಾರೆ.
ಇಂದು ಭಾರತಿ ವಿಷ್ಣುವರ್ಧನ್ ಅವರ ಜನ್ಮದಿನದ ಪ್ರಯುಕ್ತ 'ಬಾಳೆ ಬಂಗಾರ' ಸಾಕ್ಷ್ಯಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಿರುವ ಅನಿರುದ್ಧ್, ಆ ಮೂಲಕ ಭಾರತಿ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. 'ಕೀರ್ತಿ ಇನ್ನೋವೇಷನ್ಸ್' ಮೂಲಕ ನಿರ್ಮಾಣ ಆಗಲಿರುವ ಈ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ್ ಅವರದೇ ಸಂಕಲ್ಪನೆ, ಸಂಶೋಧನೆ, ಬರಹ, ನಿರೂಪಣೆ, ನಿರ್ದೇಶನ ಇರಲಿದೆ.
ಈ ಸಾಕ್ಷ್ಯಚಿತ್ರಕ್ಕೆ ಗುರುಕಿರಣ್ ಅವರ ಹಿನ್ನೆಲೆ ಸಂಗೀತ, ದಕ್ಷ ಮೀಡಿಯಾದ ಸಂಕಲನ, ಕರಿಸುಬ್ಬು ಸ್ಟುಡಿಯೋಸ್ ಧ್ವನಿ, ಶಿವಕುಮಾರ್ ಅಂಬಲಿ, ಕೆ.ರಾಮ್ ಪುಲ್ಲರೆಡ್ಡಿ, ವಿನೋದ್ ನಾಯ್ಡು ಅವರ ಛಾಯಾಗ್ರಹಣವಿದ್ದು, ನಿರ್ಮಾಣ ಬಹುತೇಕ ಮುಗಿದಿದೆ. ಇದನ್ನು ಸಾಕ್ಷ್ಯಚಿತ್ರ ಎಂದರೂ ಬಹುತೇಕ ಸಿನಿಮಾ ಥರವೇ ಇರಲಿದೆ. 2 ಗಂಟೆ 21 ನಿಮಿಷ ಕಾಲ ಇರುವ ಈ ಸಾಕ್ಷ್ಯಚಿತ್ರದಲ್ಲಿ ಭಾರತಿ ಅವರ ಜೀವನ ಕುರಿತ ಸಮಗ್ರ ಚಿತ್ರಣ ಇರಲಿದೆ. ಶೀಘ್ರದಲ್ಲೇ ಇದನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅನಿರುದ್ಧ್ ತಿಳಿಸಿದ್ದಾರೆ.