

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿಯ ಪ್ರೀತಿ-ಪ್ರೇಮ-ಪ್ರಣಯ, ಎಲ್ಲರಿಗೂ ತಿಳಿದಿರುವ ವಿಷಯ. ಆರು ವರ್ಷಗಳ ಓಡಾಟದ ಬಳಿಕ ಈ ಜೋಡಿ ಈಗ ಮದುವೆಯಾಗಲು ಮುಂದಾಗಿದೆ. ಹಾಗಂತ ಇಬ್ಬರೂ ಎಲ್ಲೂ ಹೇಳಿಕೊಂಡಿಲ್ಲವಾದರು, ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಆ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೆ ಮಲೈಕಾ ‘ಐ ಸೆಡ್ ಯೆಸ್’ ಎಂದು ಬರೆದುಕೊಂಡು, ತಲೆತಗ್ಗಿಸಿ ನಾಚಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅರ್ಜುನ್ ಕಪೂರ್, ಅವರ ಬಳಿ ಮದುವೆಯಾಗಲು ಕೇಳಿಕೊಂಡಿರಬೇಕು, ಹೀಗಾಗಿ ಮಲೈಕಾ ಹೌದು ಎಂದಿದ್ದಾರೆ. ಅದನ್ನೇ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅವರಿಗೆ ಶುಭಹಾರೈಕೆಗಳನ್ನು ಹೇಳುತ್ತಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ 49ನೇ ವಸಂತಕ್ಕೆ ಕಾಲಿಟ್ಟ ಮಲೈಕಾ, ಈ ಹಿಂದೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ರನ್ನು ಮದುವೆಯಾಗಿದ್ದರು. 19 ವರ್ಷಗಳ ದಾಂಪತ್ಯದಲ್ಲಿ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. 2017ರಲ್ಲಿ ಮಲೈಕಾ, ಅರ್ಬಾಜ್ರಿಂದ ವಿಚ್ಛೇದನ ಪಡೆದರು.
ಇನ್ನು ಅರ್ಜುನ್ ಕಪೂರ್ಗೆ ಈಗ 37 ವರ್ಷ. ಈ ಹಿಂದೆ ಕೆಲವು ನಟಿಯರ ಜತೆ ಹೆಸರು ಕೇಳಿಬಂದಿದ್ದರೂ, ಅರ್ಜುನ್ ಆ ಸುದ್ದಿಗಳನ್ನು ಅಲ್ಲಗಳೆದಿದ್ದರು. ಕೆಲವು ತಿಂಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡುತ್ತಾ ಅವರು, ‘ಸದ್ಯಕ್ಕೆ ಕರಿಯರ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ’ ಎಂದಷ್ಟೇ ಹೇಳಿದ್ದರು. ಸದ್ಯ ಅರ್ಜುನ್ ‘ಕುತ್ತೇ’ ಮತ್ತು ‘ದಿ ಲೇಡಿ ಕಿಲ್ಲರ್’ ಚಿತ್ರಗಳಲ್ಲಿ ಬಿಜಿಯಿದ್ದಾರೆ. ಮತ್ತೊಂದೆಡೆ ಮಲೈಕಾ ತಮ್ಮ ಸಹೋದರಿ ಅಮೃತಾ ಜತೆ ‘ಅರೋರಾ ಸಿಸ್ಟರ್ಸ್’ ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)