ದಿಶಾ ಕೊನೆಯ ಕರೆ ಮಾಡಿದ್ಯಾರಿಗೆ? ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ್ದನ್ನು ಅಲ್ಲಗಳೆದ ಮುಂಬೈ ಪೊಲೀಸರು!

Disha
Published on

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಸಾವಿನ ಪ್ರಕರಣ ಕುರಿತು ದಿನಕ್ಕೊಂದು ವದಂತಿಗಳು ಹರಿದಾಡುತ್ತಿದ್ದು, ಕೊನೆಯದಾಗಿ ಮುಂಬೈ ಪೊಲೀಸ್​ ಕಂಟ್ರೋಲ್​ ರೂಮ್​ ನಂಬರ್​ 100ಕ್ಕೆ ದಿಶಾ ಕರೆ ಮಾಡಿದ್ದರು ಎಂಬ ಹೊಸ ವದಂತಿ ಹರಿದಾಡುತ್ತಿದ್ದು, ಅದನ್ನು ಮುಂಬೈ ಪೊಲೀಸರು ತಳ್ಳಿಹಾಕಿದ್ದಾರೆ.

ದಿಶಾ ಅವರು ಕೊನೆಯದಾಗಿ ಆಕೆಯ ಫ್ರೆಂಡ್ಸ್​ ಅಂಕಿತಾಗೆ ಕರೆ ಮಾಡಿದ್ದರು ಎಂದು ಮುಂಬೈ ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದು, 100ಗೆ ಕರೆ ಮಾಡಿದ್ದರು ಎಂಬುದು ಸುಳ್ಳು ಎಂದಿದ್ದಾರೆ.

ದಿಶಾ ಸಾವಿನ ಸುತ್ತ ಈಗಾಗಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಜೂನ್​ 8ರಂದು ದಿಶಾ ತಮ್ಮ ಅಪಾರ್ಟ್​ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಾದ ಕೆಲವೇ ದಿನಗಳಲ್ಲಿ ಅಂದರೆ ಜೂನ್​ 14ರಂದು ಸುಶಾಂತ್​ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಎರಡು ಪ್ರಕರಣಗಳ ನಡುವೆ ಏನಾದರೂ ಸಂಬಂಧ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರ ನಡುವೆ ಅನೇಕ ವದಂತಿಗಳು ಹರಿದಾಡುತ್ತಿವೆ.

ದಿಶಾ ಶವವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂಬ ವದಂತಿಯನ್ನು ಇತ್ತೀಚೆಗಷ್ಟೇ ಮುಂಬೈ ಪೊಲೀಸರು ನಿರಾಕರಿಸಿದ್ದರು. ಇದರೊಂದಿಗೆ ದಿಶಾ ಕುರಿತಾದ ವದಂತಿಗಳಿಂದ ಕಂಗಾಲಾಗಿದ್ದ ಅವರ ಕುಟುಂಬ ಮುಂಬೈನ ಮಾಲ್ವನಿ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದರು. ಆಕೆಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಚರ್ಚೆಗಳು ಸಹ ನಡೆಯುತ್ತಿವೆ. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕ ನಾರಾಯಣ ರಾಣೆ ದಿಶಾ ಸಾವಿನ ಕುರಿತು ಮಾತನಾಡಿ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಸುಶಾಂತ್​ ಜತೆಯಲ್ಲಿ ದಿಶಾ ಸಾವಿನ ಪ್ರಕರಣದ ತನಿಖೆಯು ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net