

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳನ್ನು ಸೆಳೆಯಲು ವಿಶೇಷ ಹಾಡೊಂದನ್ನು ಶುಕ್ರವಾರ ಬಿಡುಗಡೆ ಮಾಡಿದೆ. ತಂಡದ ಪ್ರಮುಖ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯಜುವೇಂದ್ರ ಚಾಹಲ್ ಮತ್ತು ಸ್ಥಳೀಯ ಆಟಗಾರ ಪವನ್ ದೇಶಪಾಂಡೆ ಮುಂತಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಈ ಹಾಡು ಈಗ ವಿವಾದಕ್ಕೀಡಾಗಿದೆ.
ಅಭಿಮಾನಿಗಳನ್ನೇ ತಂಡದ 12ನೇ ಎಂದು ಪರಿಗಣಿಸಿರುವ ಆರ್‌ಸಿಬಿ ಈ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಿದೆ. ಆದರೆ ಅವರೇ ಈಗ ಈ ಹಾಡಿನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಹಾಡಿನಲ್ಲಿರುವ ಹಿಂದಿ ಹೇರಿಕೆ. ಇದರಿಂದ ಟೂರ್ನಿಗೆ ಮೊದಲೇ ಆರ್‌ಸಿಬಿ ತಂಡ ತನ್ನ ಅಭಿಮಾನಿಗಳ ಮನಸ್ಸಿಗೆ ನೋವು ಮಾಡಿದೆ.
'ಏನೇ ಬರಲಿ... ಎಂತೇ ಇರಲಿ..' ಎಂದು ಹಾಡು ಕನ್ನಡದಲ್ಲಿಯೇ ಆರಂಭವಾಗುತ್ತದೆ. ಆದರೆ ಬಳಿಕ ಹಾಡಿನಲ್ಲಿ ಹಿಂದಿ ಸಾಹಿತ್ಯದ ಬಳಕೆ ಹೆಚ್ಚಾಗಿರುವುದು ಕನ್ನಡ ಪ್ರೇಮಿಗಳನ್ನು ಕೆರಳಿಸಿದೆ. ಆರ್‌ಸಿಬಿ ಕರ್ನಾಟಕದ ತಂಡ. ಒಂದೋ ಹಾಡಿನಲ್ಲಿ ಕನ್ನಡವನ್ನು ಬಳಸಿ, ಇಲ್ಲದಿದ್ದರೆ ತಂಡದ ಹೆಸರಿನಿಂದ ಬೆಂಗಳೂರು ಪದವನ್ನು ಕೈಬಿಡಿ ಎಂದು ಅಭಿಮಾನಿಗಳು ಆರ್‌ಸಿಬಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೋವಿಡ್ ಹೀರೋಗಳಿಗೆ ಆರ್‌ಸಿಬಿ ಸಲ್ಯೂಟ್..!
ಇನ್ನು ಹಾಡನ್ನು ಕನ್ನಡ ರ‌್ಯಾಪ್ ಎಂದು ಹೇಳಲಾಗಿದ್ದರೂ, ಹಾಡಿನಲ್ಲಿ ಕನ್ನಡ ರಪ್ ಅಂತ ಬಂದು ಹೋಗುತ್ತಷ್ಟೇ ಎಂದೂ ಕೆಲವರು ಕಿಡಿ ಕಾರಿದ್ದಾರೆ. ಆರ್‌ಸಿಬಿ ಕನ್ನಡ ನಾಡಿನ ತಂಡವಾಗಿರುವಾಗ ಹಾಡಿನಲ್ಲಿ ಹಿಂದಿ ಬಳಕೆಯ ಅಗತ್ಯ ಏನಿದೆ ಎಂದೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ತಂಡವೆಂದು ಆರ್‌ಸಿಬಿಗೆ ಬೆಂಬಲ ನೀಡುತ್ತಿದ್ದೇವೆ. ಆದರೆ ನೀವು ಕನ್ನಡವನ್ನೇ ಬಳಸದಿದ್ದರೆ ನಾವೇಕೇ ತಂಡವನ್ನು ಬೆಂಬಲಿಸಬೇಕು ಎಂದೂ ಕೆಲವರು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆರ್‌ಸಿಬಿ ಹಾಡು ಚೆನ್ನಾಗಿದೆ. ಆದರೆ ಹಿಂದಿ ಬದಲಾಗಿ ಸಂಪೂರ್ಣ ಕನ್ನಡವನ್ನೇ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡ ಯಾವಾಗಲೂ ತಮಿಳುನಾಡಿನ ಸ್ಥಳೀಯ ಜನರ ಭಾವನೆಗಳಿಗೆ ಬೆಲ ನೀಡುತ್ತದೆ. ಆದರೆ ಆರ್‌ಸಿಬಿ ತಂಡ ಯಾಕೆ ಸ್ಥಳೀಯರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ. ನಾವು ಹಾಡಿನಲ್ಲಿ ಕನ್ನಡದ ಬಳಕೆಯನ್ನಷ್ಟೇ ಕೇಳುತ್ತಿದ್ದೇವೆ. ಯಾಕೆಂದರೆ ಬೆಂಗಳೂರಿನ ಭಾಷೆ ಕನ್ನಡ ಎಂದೂ ದೊಡ್ಡ ಗಣೇಶ್ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ.
ಅಭಿಮಾನಿಗಳ ತೀವ್ರ ಟೀಕೆಗಳ ನಂತರ ಆರ್‌ಸಿಬಿ ಹಾಡಿನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮತ್ತೊಂದು ವಿಡಿಯೋ ಬಿಟ್ಟಿದ್ದು, ಅದರಲ್ಲಿ ಕನ್ನಡದ ರ‌್ಯಾಪ್ ಬಳಕೆ ಮಾಡಲಾಗಿದೆ. ಆದರೆ ಅಲ್ಪಸ್ವಲ್ಪ ಹಿಂದಿಯನ್ನು ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಆರ್‌ಸಿಬಿ ಅಭಿಮಾನಿಗಳು ಇನ್ನೂ ಸಂಪೂರ್ಣ ಸಮಾಧಾನಗೊಂಡಿಲ್ಲ.