

ಬೆಂಗಳೂರು: ನಟ ಕಿರಣ್ ಶ್ರೀನಿವಾಸ್ ಚಿತ್ರರಂಗಕ್ಕೆ ಬಂದು ದಶಕದ ಮೇಲಾಯಿತು. ನಟನೆಯಲ್ಲಿಯೇ ಗುರುತಿಸಿಕೊಂಡು ಬಂದಿದ್ದ ಕಿರಣ್, ಈಗ ಬಹುವರ್ಷಗಳ ಕನಸೊಂದನ್ನು ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ. ಅದೇ ನಿರ್ದೇಶನದ ಕನಸು! ಹೌದು, ಕಳೆದ ನಾಲ್ಕು ವರ್ಷಗಳಿಂದ ನಟನೆ ಹೊರತುಪಡಿಸಿ ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಕಿರಣ್ ಕನಸಾಗಿತ್ತು. ಈಗ ಅದನ್ನು ಕಿರುಚಿತ್ರದ ಮೂಲಕ ನನಸಾಗಿಸಿಕೊಂಡಿದ್ದಾರೆ. ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಕಿರುಚಿತ್ರವೊಂದನ್ನು ಅವರು ನಿರ್ದೇಶಿಸಿದ್ದು, ಈಗಾಗಲೇ ಅದರ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಹಾಗಾದರೆ, ಕಿರುಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ? ಸದ್ಯ ಕಿರಣ್ ಹೇಳುವಂತೆ, ‘ಈ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಇನ್ನೋರ್ವ ಕಲಾವಿದ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಮುಗಿಸಿಕೊಂಡಿದ್ದೇವೆ. ಶೀರ್ಷಿಕೆ ಸೇರಿ ಇನ್ನುಳಿದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ’ ಎನ್ನುತ್ತಾರೆ ಕಿರಣ್.
ಎರಡು ದಿನಗಳ ಕಾಲ ಚಿತ್ರೀಕರಣ ಮಾಡಿರುವ ಕಿರುಚಿತ್ರಕ್ಕೆ ಡೆನಿಸ್ ಛಾಯಾಗ್ರಹಣ ಮಾಡಿದ್ದಾರೆ. ಆಡಿಯೋ ಲೈಫ್ ಸಂಸ್ಥೆಯ ಯಶವಂತ್ ಸೌಂಡ್ ಡಿಸೈನ್ ಮಾಡಿದ್ದಾರೆ. ಸದ್ಯಕ್ಕೆ ಎಡಿಟಿಂಗ್ ಕೆಲಸಗಳು ಬಾಕಿ ಇವೆಯಂತೆ. ‘15 ನಿಮಿಷದ ಈ ಕಿರುಚಿತ್ರದಲ್ಲಿ ಮನರಂಜನೆಯೇ ಮುಖ್ಯ ಉದ್ದೇಶ. ಅದಕ್ಕೊಂದಿಷ್ಟು ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಬೆರೆಸಿದ್ದೇವೆ. ಈ ಕಿರುಚಿತ್ರವನ್ನು ಸಿನಿಮೋತ್ಸವಗಳಿಗೆ ಕೊಂಡೊಯ್ಯುವ ಪ್ಲಾ್ಯನ್ ಇದೆ’ ಎಂಬುದು ಕಿರಣ್ ಮಾತು. ಈ ಹಿಂದೆ ಐಶಾನಿ ಶೆಟ್ಟಿ ನಿರ್ದೇಶನದ ‘ಕಾಜಿ’ ಕಿರುಚಿತ್ರದಲ್ಲಿ ಹಳ್ಳಿ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದ ಹಿತಾ ಚಂದ್ರಶೇಖರ್, ಈಗ ಪತಿ ನಿರ್ದೇಶನದ ಕಿರುಚಿತ್ರದ ಭಾಗವಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿ ಅವರೇ ಕಾಣಿಸಿಕೊಳ್ಳುವುದರ ಜತೆಗೆ ನಿರ್ವಪಕಿಯಾಗಿಯೂ ಸಾಥ್ ನೀಡಿದ್ದಾರೆ.
ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿಂದಲೂ ಇತ್ತು. ನೇರವಾಗಿ ಪೂರ್ಣ ಪ್ರಮಾಣದ ಸಿನಿಮಾ ಬದಲಿಗೆ ಕಿರುಚಿತ್ರ ಆಯ್ದುಕೊಂಡೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದ್ದು, ಹಿತಾ ನಾಯಕಿಯಾಗಿ ನಟಿಸಿದ್ದಾರೆ.
| ಕಿರಣ್ ಶ್ರೀನಿವಾಸ್, ನಿರ್ದೇಶಕ