

ಚೆನ್ನೈ: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ವಿಜಯ್ ರೆಡ್ಡಿ ಅವರು ಬಹುಅಂಗಾಂಗ ವೈಫಲ್ಯದಿಂದ ಶುಕ್ರವಾರ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
1970ರಲ್ಲಿ ಬಿಡುಗಡೆಯಾದ ‘ರಂಗಮಹಲ್ ರಹಸ್ಯ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಅವರು, ಡಾ. ರಾಜಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರ ನಿರ್ದೇಶಿಸಿದರು. ಈ ಚಿತ್ರ ಹಿಟ್ ಆಗುತ್ತಿದ್ದಂತೆಯೇ. ಮುಂದಿನ ವರ್ಷಗಳಲ್ಲಿ ‘ಮಯೂರ’, ‘ಶ್ರೀ ಶ್ರೀನಿವಾಸ ಕಲ್ಯಾಣ’, ‘ನಾ ನಿನ್ನ ಮರೆಯಲಾರೆ’, ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಭಕ್ತ ಪ್ರಹ್ಲಾದ’, ‘ನೀ ನನ್ನ ಗೆಲ್ಲಲಾರೆ’, ‘ದೇವ’, ‘ಮೋಜುಗಾರ ಸೊಗಸುಗಾರ’, ‘ನಾ ನಿನ್ನ ಬಿಡಲಾರೆ’, ‘ಆಟೋ ರಾಜ’, ‘ಶಿವ ಮೆಚ್ಚಿದ ಕಣ್ಣಪ್ಪ’ ಸೇರಿದಂತೆ ಕನ್ನಡದಲ್ಲಿ 40 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ವಿಷ್ಣುವರ್ಧನ್ ಅಭಿನಯದ ‘ಕರ್ನಾಟಕ ಸುಪುತ್ರ’ ಚಿತ್ರವು ವಿಜಯ್ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.
ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ಹಿಂದಿಯಲ್ಲೂ ವಿಜಯ್ ಅವರು ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಡಾ. ರಾಜಕುಮಾರ್ ಅಭಿನಯದ ‘ಭಕ್ತ ಅಂಬರೀಶ’ ಚಿತ್ರವನ್ನು ನಿರ್ದೇಶಿಸುವುದಕ್ಕೆ ವಿಜಯ್ ಮುಂದಾಗಿದ್ದರು. ಚಿತ್ರದ ಮುಹೂರ್ತವಾದರೂ, ಕಾರಣಾಂತರಗಳಿಂದ ಚಿತ್ರ ಮುಂದುವರೆಯಲಿಲ್ಲ.
ಇದನ್ನೂ ಓದಿ: ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್ ಜಲೋಟ?
ಕಳೆದ ಕೆಲವು ವರ್ಷಗಳಿಂದ, ಚಿತ್ರರಂಗದಿಂದ ದೂರವೇ ಇದ್ದ ಅವರು, ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಲಕಾರಿಯಾಗದೆ ಅವರು ನಿಧನರಾಗಿದ್ದಾರೆ.