ದರ್ಶನ್​ ಜತೆ ತರುಣ್​ ಸುಧೀರ್​ ಮತ್ತೊಂದು ಸಿನಿಮಾ; ವರಮಹಾಲಕ್ಷ್ಮೀ ಹಬ್ಬದಂದೇ ನಡೆಯಿತು ಸ್ಕ್ರಿಪ್ಟ್ ಪೂಜೆ

robert
Published on

ಬೆಂಗಳೂರು: ಕಳೆದ ನಾಲ್ಕು ತಿಂಗಳಿಂದ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ತಾನೇ ಸಡಿಲಗೊಂಡಿದೆ. ಈ ನಡುವೆ ಸಾಕಷ್ಟು ನಿರ್ದೇಶಕರು ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬೊಬ್ಬರೆ ಸಿನಿಮಾಗಳನ್ನು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ತರುಣ್​ ಸುಧೀರ್​ ಸಹ ವರಮಹಾಲಕ್ಷ್ಮೀ ಹಬ್ಬದ ದಿನದಂದೇ ಹೊಸ ಸಿನಿಮಾದ ಕೆಲಸ ಆರಂಭಿಸಿದ್ದಾರೆ.

ವಿಶೇಷ ಏನೆಂದರೆ, ರಾಬರ್ಟ್​ ಸಿನಿಮಾ ಬಳಿಕ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜತೆಯಲ್ಲಿಯೇ ಈ ಸಿನಿಮಾ ಸಹ ಮಾಡುತ್ತಿದ್ದಾರೆ. ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೂ ಕೈ ಜೋಡಿಸಿದ್ದಾರೆ. ಇದೀಗ ಮೊದಲಾರ್ಥವಾಗಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡಿರುವ ತರುಣ್​ ಸುಧೀರ್​, ಶೀಘ್ರದಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ ವೇಳೆಗೆ ರಾಬರ್ಟ್​ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡುತ್ತಲೇ ಬರಬೇಕಾಯಿತು. ಸದ್ಯಕ್ಕೆ ಚಿತ್ರಮಂದಿರ ತೆರೆಯುವಿಕೆಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಸೆಪ್ಟೆಂಬರ್​ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಅದು ಇನ್ನಷ್ಟೇ ಅಧಿಕೃತವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net