ಮುತ್ತಿನ ಹಾರ ಹೆಣೆದಿದ್ದೇ ರೋಚಕ!; ಇಂದು ವಿಷ್ಣುವರ್ಧನ್ 12ನೇ ಪುಣ್ಯಸ್ಮರಣೆ

Vishnuvardhan
Published on
ಕನ್ನಡ ಚಿತ್ರರಂಗದ ಹಿಟ್ ಕಾಂಬಿನೇಷನ್ ಪೈಕಿ ವಿಷ್ಣುವರ್ಧನ್ ಮತ್ತು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಜೋಡಿ ಪ್ರಮುಖ. ಈ ಜೋಡಿ ‘ಬಂಧನ’, ‘ಮುತ್ತಿನ ಹಾರ’, ‘ನಾಗರಹೊಳೆ’ ಮುಂತಾದ ಜನಪ್ರಿಯ ಚಿತ್ರಗಳನ್ನು ನೀಡಿದೆ. ಈ ಪೈಕಿ ಅತ್ಯಂತ ಯಶಸ್ವಿ ಚಿತ್ರವೆಂದರೆ ಅದು ‘ಬಂಧನ’. ಇದರ ನಂತರ ವಿಷ್ಣುವರ್ಧನ್ ಮತ್ತು ಬಾಬು ಐದು ವರ್ಷಗಳ ಕಾಲ ಜತೆಗೆ ಚಿತ್ರ ಮಾಡಿರಲಿಲ್ಲ. ಈ ಜೋಡಿ ಪುನಃ ಒಂದಾಗಿದ್ದು ‘ಮುತ್ತಿನ ಹಾರ’ದಲ್ಲಿ. ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ ‘ಮುತ್ತಿನ ಹಾರ’ ಹೇಗೆ ಸಾಧ್ಯವಾಯಿತು, ಈ ಚಿತ್ರದಲ್ಲಿ ವಿಷ್ಣುವರ್ಧನ್ ಹೇಗೆ ತೊಡಗಿಸಿಕೊಂಡಿದ್ದರು ಮುಂತಾದ ಹಲವು ವಿಷಯಗಳನ್ನು ಬಾಬು, ವಿಷ್ಣುವರ್ಧನ್ ಅವರ 12ನೇ ಪುಣ್ಯತಿಥಿಯ ಸಂದರ್ಭದಲ್ಲಿ ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
| ಎಸ್.ವಿ. ರಾಜೇಂದ್ರ ಸಿಂಗ್ ಬಾಬು

‘ಬಂಧನ’ ಸೂಪರ್ ಹಿಟ್ ಆಯಿತು. 25 ಕೇಂದ್ರಗಳಲ್ಲಿ 25 ವಾರ ಪ್ರದರ್ಶನ ಕಂಡಿತು. ಆ ನಂತರ ನಾನು ಹಿಂದಿಯಲ್ಲಿ ಬಿಜಿಯಾಗಿಬಿಟ್ಟೆ. ವಿಷ್ಣು ಒಂದರಹಿಂದೊಂದು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಈ ಮಧ್ಯೆ, ನನ್ನದೇ ನಿರ್ವಣದ ‘ಕರ್ಣ’ ಮತ್ತು ‘ಕೃಷ್ಣ ನೀ ಬೇಗನೇ ಬಾರೋ’ ಚಿತ್ರಗಳಲ್ಲಿ ನಟಿಸಿದ್ದರು. ‘ಬಂಧನ’ ನಂತರ ವಿಷ್ಣು-ಸುಹಾಸಿನಿ ಅವರನ್ನು ಸೇರಿಸಿ ಚಿತ್ರ ಮಾಡಬೇಕೆಂಬ ಪ್ರಯತ್ನಗಳಾದರೂ ಸೂಕ್ತ ಕಥೆ ಸಿಗದಿದ್ದರಿಂದ ಸುಮ್ಮನಿದ್ದೆ. ಏಕೆಂದರೆ, ಅದಕ್ಕೂ ಮೀರಿದ ಇನ್ನೇನನ್ನೋ ಮಾಡಬೇಕಿತ್ತು. ಆ ಸಂದರ್ಭದಲ್ಲಿ ವಿ.ಎಂ. ಜೋಷಿ ಅವರ ಪರಿಚಯವಾಯಿತು. ಸೈನಿಕರ ಬಗ್ಗೆ ಅವರು ಬರೆದ ಈ ಕಥೆ ಬಹಳ ಇಷ್ಟವಾಯಿತು. ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ‘ಅನ್ನಪೂರ್ಣ’ ಎಂಬುದು ಆ ಕಥೆಯ ಹೆಸರು. ದೇಶಪ್ರೇಮ, ಪ್ರೀತಿ, ತ್ಯಾಗ ಎಲ್ಲವೂ ಇರುವ ಕಥೆ ಇದೆ. ಆ ಪ್ರಮಾಣದ ಚಿತ್ರ ಅದುವರೆಗೂ ಕನ್ನಡದಲ್ಲಿ ಯಾರೂ ಮಾಡಿರಲಿಲ್ಲ. ಇದನ್ನು ಯಾಕೆ ಮಾಡಬಾರದು ಎಂದನಿಸಿ ವಿಷ್ಣುಗೆ ರೀಡಿಂಗ್ ಕೊಟ್ಟೆ. ತುಂಬಾ ಥ್ರಿಲ್ ಆಗಿದ್ದರು. ಬಹಳ ಖುಷಿಪಟ್ಟು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು.

‘ಮುತ್ತಿನ ಹಾರ’ ಆ ಕಾಲಕ್ಕೆ ಸಾಮಾನ್ಯ ಚಿತ್ರವಾಗಿರಲಿಲ್ಲ. ಬಜೆಟ್ ದೊಡ್ಡದು ಎನ್ನುವುದರ ಜತೆಗೆ, ಕಾಶ್ಮೀರ ಮತ್ತು ರಾಜಸ್ತಾನದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಒಂದು ಕಡೆ ಘೋರ ಚಳಿ, ಇನ್ನೊಂದು ಕಡೆ ರಣಬಿಸಿಲು. ಆರ್ವಿು ಕಾಸ್ಟ್ಯೂಮ್ಳನ್ನು ಹಾಕಿಕೊಂಡು, ಅಷ್ಟೊಂದು ರಿಸ್ಕ್​ಗಳ ಮಧ್ಯೆ ಶೂಟ್ ಮಾಡಿದ್ದು ... ಬಹುಶಃ ಬೇರೆ ಕಲಾವಿದರ ಇಂಥದ್ದಕ್ಕೆಲ್ಲ ಒಪು್ಪತ್ತಿದ್ದರೋ, ಇಲ್ಲವೋ ಗೊತ್ತಿಲ್ಲ. ಅದರಲ್ಲೂ ವಿಷ್ಣು ಏರೋಪ್ಲೇನ್​ನಿಂದ ಬಿದ್ದು, ಆ ನೋವು ಅವರಿಗೆ ಕೊನೆಯವರೆಗೂ ಇತ್ತು. ಆದರೆ, ವಿಷ್ಣು ಒಂದು ದಿನಕ್ಕೂ ಬೇಸರ ಮಾಡಿಕೊಳ್ಳದೆ, ಸಂತೋಷದಿಂದ ಚಿತ್ರೀಕರಣದಲ್ಲಿ ಭಾಗವಹಿಸಿದರು. ಈ ಚಿತ್ರಕ್ಕೆ ಡೇಟ್ ಜಾಸ್ತಿ ಬೇಕು ಎಂದು ಮೊದಲೇ ವಿಷ್ಣುಗೆ ಹೇಳಿದ್ದೆ. ಎರಡು ಚಿತ್ರಗಳ ಸಂಭಾವನೆ ಕೊಟ್ಟುಬಿಡು ಎಂದು ವಿಷ್ಣು ತಮಾಷೆ ಮಾಡುತ್ತಿದ್ದರು. ಆಗಿನ ಕಾಲಕ್ಕೆ ‘ಮುತ್ತಿನ ಹಾರ’, ದುಬಾರಿ ಬಜೆಟ್​ನ ಚಿತ್ರವಾಗಿತ್ತು. 100 ದಿನಗಳವರೆಗೂ ಆ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿತ್ತು. ವಿಷ್ಣು ಅವರ ಮೇಕಪ್ ಮಾಡುವುದಕ್ಕೆ ದಿಲೀಪ್ ಕುಮಾರ್ ಅವರ ಮೇಕಪ್​ವ್ಯಾನ್ ಆಗಿದ್ದ ಪಾಂಡೆ ಬಂದಿದ್ದರು.

ಈ ಚಿತ್ರದಲ್ಲಿ ವಿಷ್ಣುಗೆ ಮೂರು ವಿಭಿನ್ನ ಗೆಟಪ್​ಗಳಿದ್ದು, ಅದಕ್ಕೆ ತಕ್ಕ ಹಾಗಿ ಪಾಂಡೆ ಅವರನ್ನು ರೂಪುಗೊಳಿಸಿದ್ದರು. ಚಿತ್ರದಲ್ಲಿನ ಅವರ ಡ್ರೆಸ್​ಗಳನ್ನು ಆರ್ವಿು ಅವರಿಂದಲೇ ಹೊಲಿಸಲಾಗಿತ್ತು. ವಿಗ್​ಗಳನ್ನು ಮುಂಬೈನಿಂದ ತರಿಸಲಾಗಿತ್ತು. ಇಡೀ ಚಿತ್ರದಿಂದ ವಿಷ್ಣು ಬಹಳ ಖುಷಿಯಾಗಿದ್ದರು. ಬೆಂಗಳೂರು, ಮದರಾಸಿನಲ್ಲಿ ಹಲವರಿಗೆ ಚಿತ್ರ ತೋರಿಸಿದ್ದರು. ಅವರಿಗೆಂದೇ ಪ್ರಸಾದ್ ಲ್ಯಾಬ್​ನಲ್ಲಿ 8-10 ಪ್ರದರ್ಶನ ಏರ್ಪಡಿಸಿದ್ದೆ. ವೀರಾಸ್ವಾಮಿ ಅವರು ಚಿತ್ರ ನೋಡಿ ಅತ್ತುಬಿಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಚಿತ್ರಕ್ಕೆ ಶೇ. 100ರಷ್ಟು ತೆರಿಗೆ ವಿನಾಯ್ತಿ ಕೊಡಬೇಕು ಎಂದು ಪತ್ರ ಬರೆದು ಕೊಟ್ಟಿದ್ದರು. ಆದರೆ, ಕಾರಣಾಂತರಗಳಿಂದ ವಿನಾಯ್ತಿ ಸಿಗಲಿಲ್ಲ. ಆದರೆ, ಇದೀಗ ‘ಮುತ್ತಿನ ಹಾರ’ ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲಿ ಒಂದು ಎಂದು ಗುರುತಿಸಲ್ಪಡುತ್ತದೆ. ಈ ಚಿತ್ರ ರೂಪುಗೊಳ್ಳುವಲ್ಲಿ ವಿಷ್ಣು ಸಹಕಾರ ಮತ್ತು ಪ್ರೋತ್ಸಾಹ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

(ಲೇಖಕರು ಹಿರಿಯ ನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net