ಕಲ್ಕಿ, ಕಿಷ್ಣನಾದ ಪ್ರೇಮ್ : ‘ಏಕ್ ಲವ್ ಯಾ’ ನಂತರ ಮೂರು ಚಿತ್ರಗಳಲ್ಲಿ ನಟನೆ

Prem
Published on

ಬೆಂಗಳೂರು : ಮೂರ್ನಾಲ್ಕು ವರ್ಷಗಳಿಂದ ನಟನೆಯಿಂದ ದೂರವೇ ಉಳಿದುಬಿಟ್ಟಿದ್ದರು ಪ್ರೇಮ್ ಅದಕ್ಕೆ ಕಾರಣ, ನಿರ್ದೇಶನ. ಮೊದಲು ‘ಕಲ್ಕಿ’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟವರು, ಕೊನೆಗೆ ‘ದಿ ವಿಲನ್’ ಎಂಬ ಚಿತ್ರ ಮಾಡಿದರು. ಅದು ಮುಗಿದ ಕೆಲವೇ ತಿಂಗಳುಗಳಲ್ಲಿ ‘ಏಕ್ ಲವ್ ಯಾ’ ಘೋಷಿಸಿದರು. ಇದೆಲ್ಲದರಿಂದ ಮೂರ್ನಾಲ್ಕು ವರ್ಷಗಳ ಕಾಲ ಅವರು ಬಣ್ಣ ಹಚ್ಚಲಾಗಲಿಲ್ಲ.

ಇನ್ನೇನು, ‘ಏಕ್ ಲವ್ ಯಾ’ ಮುಗಿಯುವ ಹಂತಕ್ಕೆ ಬಂದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಆ ನಂತರ ಒಂದೆರೆಡು ವರ್ಷಗಳ ಕಾಲ ಪ್ರೇಮ್ ನಟನೆಯಲ್ಲೇ ಬಿಜಿಯಾಗಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಪ್ರೇಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರು ಚಿತ್ರತಂಡಗಳು ಅವರಿಗೆ ಶುಭಕೋರಿ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿವೆ.

ಮೊದಲನೆಯದಾಗಿ ಎಂ.ಎಸ್.ಆರ್ ಪ್ರೊಡಕ್ಷನ್ಸ್​ನ ಹೆಸರಿಡದ ಚಿತ್ರದಲ್ಲಿ ಪ್ರೇಮ್ ನಟಿಸುತ್ತಿದ್ದು, ಈ ಚಿತ್ರವನ್ನು ಎಚ್. ವಿಜಯಕುಮಾರ್ ನಿರ್ದೇಶನ ಮಾಡಲಿದ್ದಾರೆ. ಇನ್ನು ಎರಡನೆಯ ಚಿತ್ರವೆಂದರೆ, ಅದು ‘ಐ ಆಮ್ ಕಲ್ಕಿ’. ಈ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದು, ‘ಆನೆ ಪಟಾಕಿ’ ನಿರ್ವಿುಸಿದ್ದ ಸುರೇಶ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಇನ್ನು, ಮೂರನೆಯ ಚಿತ್ರವಾಗಿ ‘ಕಿಲಾಡಿ ಕಿಷ್ಣ’ ಇದೆ. ಸದ್ಯ, ‘ಗಾಂಧಿಗಿರಿ’ ಚಿತ್ರವನ್ನು ನಿರ್ದೇಶಿಸುತ್ತಿರುವ ರಘು ಹಾಸನ್ ಅವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಅಲ್ಲಿಗೆ, ಪ್ರೇಮ್ ಕೈಯಲ್ಲಿ ಮೂರು ಚಿತ್ರಗಳಿದ್ದು, ಈ ಮೂರರ ಪೈಕಿ ಯಾವುದರಲ್ಲಿ ಮೊದಲು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net