

ನವದೆಹಲಿ: ಅಗಸ್ಟಾವೆಸ್ಟ್ಲ್ಯಾಂಡ್ ಕಂಪನಿಯಿಂದ 3,600 ಕೋಟಿ ರೂಪಾಯಿಗೆ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ದುಬೈ ಮೂಲದ ವ್ಯಾಪಾರಿ ಮಧ್ಯವರ್ತಿ ರಾಜೀವ್ ಸಕ್ಸೇನಾಗೆ ದೆಹಲಿ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿಯನ್ನು ಡಿಸೆಂಬರ್ 11ರೊಳಗೆ ಪೂರೈಸಬೇಕು ಎಂಬ ಷರತ್ತನ್ನೂ ಕೋರ್ಟ್ ವಿಧಿಸಿದೆ. ಜಾಮೀನು ನೀಡುವ ಕೋರ್ಟ್ ತೀರ್ಮಾನಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಉತ್ತರ ನೀಡುವುದಕ್ಕೆ ಸಮಯಾವಕಾಶವನ್ನೂ ಅದು ಕೇಳಿದೆ.
ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಇದೇ ವೇಳೆ, ಇನ್ನೊಬ್ಬ ಮಧ್ಯವರ್ತಿ ಸಂದೀಪ್ ತ್ಯಾಗಿ ಮತ್ತು ಇತರರಿಗೂ 2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ. ಸಿಬಿಐ ಇವರ ಜಾಮೀನು ಅರ್ಜಿಗೂ ವಿರೋಧ ವ್ಯಕ್ತಪಡಿಸಿದೆ. ಸಕ್ಸೇನಾನನ್ನು ಭಾರತಕ್ಕೆ 2019ರ ಜನವರಿ 31ರಂದು ಗಡಿಪಾರು ಮಾಡಿಸಿ ತರಲಾಗಿತ್ತು. (ಏಜೆನ್ಸೀಸ್)