ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು ...

Sanchari Vijay - Lingadevaru
Published on

ಬೆಂಗಳೂರು: ಸಂಚಾರಿ ವಿಜಯ್​ ನಿಧನರಾಗಿ ಒಂದು ವಾರವಾಗಿದೆ. ಈ ಒಂದು ವಾರದಲ್ಲಿ ವಿಜಯ್​ ಕುರಿತು ಹಲವು ವಿಷಯಗಳು ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಜಾತಿ ಲೆಕ್ಕಾಚಾರದಿಂದ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ, ಅವಕಾಶಗಳು ಕಡಿಮೆಯಾಗಿದ್ದರಿಂದ ಅವರಿಗೆ ಹಣಕಾಸಿನ ಸಮಸ್ಯೆ ಇತ್ತು, ಅದೇ ಕಾರಣಕ್ಕೆ ಅವರು ಮದುವೆಯಾಗಿರಲಿಲ್ಲ, ಚಿತ್ರರಂಗದಲ್ಲಿ ಅವರು ಶೋಷಣೆಗೊಳಗಾಗಿದ್ದರು, ಅವರಿಗೆ ತಮ್ಮ ಅರ್ಹತೆ ಮತ್ತು ಪ್ರತಿಭೆಗೆ ತಕ್ಕಂತಹ ಮನ್ನಣೆ ಸಿಗಲಿಲ್ಲ ಎಂಬ ಬೇಸರ ಕಾಡುತ್ತಿತ್ತು ... ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರಿಂದ, ಸಂಚಾರಿ ವಿಜಯ್​ ಅವರನ್ನು ಬೇರೆ ತರಹ ನೋಡುವಂತಾಗಿದೆ.

ಈ ಎಲ್ಲ ಮಾತುಗಳಿಗೆ ನಿರ್ದೇಶಕ ಬಿ.ಎಸ್​. ಲಿಂಗದೇವರು ಉತ್ತರ ನೀಡಿದ್ದಾರೆ. 'ನಾನು ಅವನಲ್ಲ ಅವಳೂ' ಚಿತ್ರವನ್ನು ನಿರ್ದೇಶಿಸಿರುವ ಲಿಂಗದೇವರು, ವಿಜಯ್​ ಅವರನ್ನು ಬಹಳ ಹತ್ತಿರದಿಂದ ಬಲ್ಲವರು. ಅವರು, ಇದೀಗ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ವಿಜಯ್​ಗೆ ಅವಕಾಶಗಳ ಕೊರತೆ ಇರಲಿಲ್ಲ. ಪ್ರತಿಯೊಂದು ಚಿತ್ರವೂ ಪ್ರಶಸ್ತಿ ತರುವುದಿಲ್ಲ ಮತ್ತು ಯಶಸ್ಸು ಸಿಗುವುದಿಲ್ಲ ಎನ್ನುವ ಸತ್ಯವನ್ನು ವಿಜಯ್​ ಅರಿತಿದ್ದರು ಎಂದು ಹೇಳಿದ್ದಾರೆ. ಇದೆಲ್ಲದರಿಂದ ವಿಜಯ್​ರಂತಹ ಮಾನವತಾವಾದಿಯನ್ನು ಸಂಕುಚಿತ ಮನೋಭಾವದಿಂದ ನೋಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಇದೀಗ ಅವರು ಸುಧೀರ್ಘವಾದ ಪತ್ರವೊಂದು ಬರೆದಿದ್ದು, ಅದರಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಲಿಂಗದೇವರು ಅವರ ಪತ್ರ ಹೀಗಿದೆ ...

ಮನುಷ್ಯತ್ವವನ್ನು ಮೈಗೂಡಿಸಿಕೊಂಡಿದ್ದ ವಿಜಯ್ ಒಬ್ಬ ಶ್ರೇಷ್ಠ ಕಲಾವಿದ‌ ಮಾತ್ರವಲ್ಲ ಅವರ ಇಡೀ ಕುಟುಂಬವೇ ನಮಗೆಲ್ಲ ಮಾದರಿಯಾಗಿರುವ ಈ ಸಂದರ್ಭದಲ್ಲಿ ಗತಿಸಿರುವ ತಂದೆ-ತಾಯಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಊಹಿಸಲು ಅಸಾಧ್ಯ.
ಇನ್ನೂ ಕೆಲವರ ಸುಳ್ಳುಗಳ  ಸರಮಾಲೆಯ ಲೇಖನದ ಶೈಲಿಗೆ ಮಾರುಹೋಗಿ ಅದೇ ಸತ್ಯ ಎಂದು ವಾದಿಸುತ್ತಿದ್ದಾರೆ ಮತ್ತು ವಿಜಯ್ ಅವರಿಗೆ ಅವಕಾಶಗಳೇ ಇರಲಿಲ್ಲ ಎಂದು ಭಾವಿಸಿದ್ದಾರೆ. ಅಂತಹವರಿಗೆ ನಾನು ಹೇಳೋದು ಇಷ್ಟೇ, ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಸುಮಾರು 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಒಂದು ಮಲೆಯಾಳಂ ಸಿನಿಮಾ ಕೂಡ ಚಿತ್ರೀಕರಣ ಮುಗಿದಿದೆ. 2014ಕ್ಕೂ ಮುಂಚೆ ಸುಮಾರು 9 ಸಿನಿಮಾಗಳಲ್ಲಿ ಅಭಿನಯಿಸಿದ್ದರು ಅವುಗಳಲ್ಲಿ 'ನಾನು ಅವನಲ್ಲ ಅವಳು' ಮತ್ತು 'ಹರಿವು' ಕೂಡ ಸೇರಿದೆ. ಒಟ್ಟು 33ಕ್ಕೂ ಹೆಚ್ಚು ಸಿನಿಮಾ ಪಯಣ ವಿಜಯ್ ಅವರದ್ದು.
ವಿಜಯ್ ಇದಕ್ಕಿಂತ ಹೆಚ್ಚು ಅವಕಾಶ ಬಯಸಲಿಲ್ಲ, ಅವನಿಗೆ ಇದ್ದ ಕೊರಗು ಒಂದೇ ಒಂದು ಅದು ನನ್ನಲ್ಲಿರುವ ಕಲೆಗೆ ಸರಿಯಾದ ಪಾತ್ರಗಳು ಸಿಗುತ್ತಿಲ್ಲ ಎಂಬುದಾಗಿತ್ತು. ಇದು 99% ಕಲಾವಿದರ ಕೊರಗು ಕೂಡ. ಪ್ರತಿಯೊಂದು ಸಿನಿಮಾವೂ ಪ್ರಶಸ್ತಿ ತರುವುದಿಲ್ಲ ಮತ್ತು ಪ್ರತಿ ಸಿನಿಮಾಗೂ ಯಶಸ್ಸು ಕೂಡ ಸಿಗಲ್ಲ ಎನ್ನುವ ಸತ್ಯ ಅರಿತಿದ್ದ ವಿಜಯ್, ತನ್ನ ಇತಿ ಮಿತಿಯೊಳಗೆ ಇದ್ದಷ್ಟು ದಿನ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದ್ದಾನೆ. ಅಂತಹ‌ ಮಾನವತಾವಾದಿಯನ್ನು ತಮ್ಮ ಸಂಕುಚಿತ ಮನೋಭಾವದಿಂದ ನೋಡಬೇಡಿ.
ಮತ್ತೊಂದು , ಕೆಲ ನಟ/ ನಟಿಯರು ವಿಜಯ್​ಗೆ ನಾನು ತುಂಬಾ ಹತ್ತಿರ ಇದ್ದೆ, ನನಗೆ ಅದು ಗೊತ್ತು, ಇದು ಗೊತ್ತು, ಅವನು ಅನುಭವಿಸಿದ ಅವಮಾನವೆಲ್ಲಾ ಗೊತ್ತು ಎಂದು ಬಾಯಿ ಬಡ್ಕೋಬೇಡಿ. ವಿಜಯ್ ಆತ್ಮೀಯರು ಮತ್ತು ಬಂಧು-ಬಳಗ ಇನ್ನೂ ಬದುಕಿದ್ದಾರೆ. ಯಾರು ಹತ್ತಿರ ಇದ್ದವರು? ಯಾರು ಕಷ್ಟದಲ್ಲಿ ಆದವರು? ಎಲ್ಲವೂ ಗೊತ್ತಿದೆ.
ವಿಜಯ್ ಕನ್ನಡಿಗರ ಮನೆ ಮನೆಗಳಲ್ಲಿ ಶಾಶ್ವತವಾಗಿ ಇದ್ದಾನೆ ಎನ್ನುವುದಕ್ಕೆ 'ನಾನು ಅವನಲ್ಲ ಅವಳು' ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೇವಲ ನಾಲ್ಕು ದಿನಕ್ಕೆ ಸುಮಾರು 17 ಲಕ್ಷ ಜನ ನೋಡಿದ್ದಾರೆ. ಇದು ಅಧಿಕೃತವಾಗಿ ಸಿರಿ ಕನ್ನಡ ಚಾನಲ್​ನವರ ಯೂಟ್ಯೂಬ್​ನಲ್ಲಿನ ಸಂಖ್ಯೆ. ಅನಧಿಕೃತವಾಗಿ ಅಪ್ಲೋಡ್ ಆಗಿದ್ದ ಲಿಂಕ್​ಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಕಳೆದ ಒಂದು ವಾರದಲ್ಲಿ ನೋಡಿದ್ದಾರೆ. ವೀಕ್ಷಕರ ಸಂಖ್ಯೆಯನ್ನು ನೋಡಿ ಈಗ ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯುತ್ತಿಲ್ಲ. ಸಿನಿಮಾ ನೋಡಿದ ಎಲ್ಲರೂ ವಿಜಯ್ ಮೇಲಿಟ್ಟ ಅಭಿಮಾನವನ್ನು ತೋರಿಸುತ್ತದೆ. ಒಂದು ವೇಳೆ ಈಗ ವಿಜಯ್ ಇದ್ದಿದ್ದರೆ ಎಂದು ಒಂದು ಕ್ಷಣ ಅನ್ನಿಸುತ್ತದೆ. ಒಬ್ಬ ನಿರ್ದೇಶಕನಾಗಿ ನನಗೆ 'ನಾನು ಅವನಲ್ಲ ಅವಳು' ಸಿನಿಮಾ ಮುಖ್ಯ, ಅದೇ ವೇಳೆ ವಿಜಯ್ ನಟಿಸಿರದಿದ್ದರೆ ಆ ಸಿನಿಮಾ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿತ್ತು ಎಂದು ಊಹಿಸುವುದು ಕೂಡ ಕಷ್ಟವಾಗುತ್ತದೆ. ನನಗೆ ಈಗಲೂ ಅನ್ನಿಸುವುದು ಒಂದೇ, ವಿಜಯ್ ನಮ್ಮ ಜೊತೆ ಇರಬೇಕಿತ್ತು.
ಜಾತಿ ವ್ಯವಸ್ಥೆಯನ್ನು ಸರಕನ್ನಾಗಿಸಿಕೊಂಡು, ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ಧಿಕ್ಕಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net