ಆ ದಿನವೇ ದರ್ಶನ್ ಎಚ್ಚೆತ್ತುಕೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ: ಇಂದ್ರಜಿತ್​ ಲಂಕೇಶ್​ ಹೇಳಿಕೆ

Idrajit Lankesh
Published on

ಮಂಡ್ಯ: 2021ರಲ್ಲಿ ನಾನು ಏಕಾಂಗಿಯಾಗಿ ನಟ ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ. ಆ ದಿನವೇ ದರ್ಶನ್​ ಸುಧಾರಣೆ ಆಗಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್​ ಹೇಳಿದರು. ​

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಮೃತ ರೇಣುಕಾಸ್ವಾಮಿ ಧರ್ಮಪತ್ನಿಗೆ ನ್ಯಾಯ ಕೊಡಿಸಬೇಕು. ಆಕೆ 5 ತಿಂಗಳ ಗರ್ಭಿಣಿ, ಹುಟ್ಟುವ ಮೊದಲೇ ಮಗು ಅನಾಥವಾಗಿದೆ. ತಾನು ವಿಧವೆ ಆಗುತ್ತೇನೆಂದು ರೇಣುಕಾಸ್ವಾಮಿ ಪತ್ನಿ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನ್ಯಾಯ ಕೊಡಿಸುವ ಜೊತೆಗೆ ಆರ್ಥಿಕವಾಗಿ ಸಹಾಯವನ್ನು ನೀಡಬೇಕು. ನಾನು ವೈಯಕ್ತಿಕವಾಗಿ 20 ಸಾವಿರ ರೂ. ನೆರವು ನೀಡುತ್ತಿದ್ದೇನೆ ಎಂದು ಹೇಳಿದರು.

ರೇಣುಕಾಸ್ವಾಮಿ ಹೆಸರಲ್ಲಿ ಒಂದು ಶೋ ನಡೆಸಿ ಇಡೀ ಚಿತ್ರರಂಗ ಆರ್ಥಿಕ ನೆರವು ನೀಡಬೇಕು. 2021ರಲ್ಲಿ ನಾನು ಏಕಾಂಗಿಯಾಗಿ ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ. ಅಂದೆ ಸುಧಾರಣೆ ಆಗಿದ್ರೆ, ಈ ರೀತಿ ಅನಾಹುತ ಆಗುತ್ತಿರಲಿಲ್ಲ. ನಾನು ದರ್ಶನ್ ಜತೆ ಎರಡು ಸಿನಿಮಾ ಮಾಡಿದ್ದೇನೆ. ಲಂಕೇಶ್ ಪತ್ರಿಕೆ ಸಿನಿಮಾದ ಅಡ್ವಾನ್ಸ್ ಹಣದಲ್ಲಿ ಹೊಸ ಸ್ಕೋಡಾ ಕಾರು ಖರೀದಿ ಮಾಡಿದ್ದರು. ಈ ಪರಿಸ್ಥಿತಿ ದರ್ಶನ್​ಗೆ ಆಗಬಾರದಿತ್ತು ಎಂದರು.

ಈ ಘಟನೆ ನಡೆಯುವುದಕ್ಕೆ ಸಾಮಾಜಿಕ ಜಾಲತಾಣವೇ ಕಾರಣ. ಸಾಮಾಜಿಕ ಜಾಲತಾಣ ಇಂದು ಅದ್ಭುತವಾದ ಮಾಧ್ಯಮ. ಆದರೆ ಸಾಮಾಜಿಕ ಜಾಲತಾಣ ತುಂಬಾ ದುರ್ಬಳಕೆ ಆಗುತ್ತಿದೆ. ಅಶ್ಲೀಲವಾದ ಮೆಸೇಜ್ ಹಾಕದೇ ಇದ್ದಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಸರ್ಕಾರ ಸಾಮಾಜಿಕ ಜಾಲತಾಣದ ಬಗ್ಗೆ ಹೆಚ್ಚು ಗಮನಹರಿಸಬೇಕು. ಪತ್ರಕರ್ತರ ಮೇಲೆ ಹೇಗೆ ಮಾನಹಾನಿ ಕೇಸ್ ಹಾಕುತ್ತಾರೋ ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಅಥವಾ ಅಶ್ಲೀಲ ಮೆಸೇಜ್ ಹಾಕುವವರಿಗೂ ಕೇಸ್ ಹಾಕಬೇಕು ಎಂದು ಇಂದ್ರಜಿತ್​ ಲಂಕೇಶ್​ ಆಗ್ರಹಿಸಿದರು.

ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳ ಮನೆಯಲ್ಲಿ ಕ್ರೈಂ ನಡೆದರೆ ಕ್ರಮ ಕೈಗೊಳ್ಳುತ್ತಾರೆ. ಆದರೆ, ಬೇರೆ ಮನೆಯವರ ಮನೆಯಲ್ಲಿ ಏನಾದರೂ ನಡೆದರೆ ನಗುತ್ತಾ ಕೂರುತ್ತಾರೆ. ಸಿಎಂ ಸಿದ್ದರಾಮಯ್ಯನವರು ಸೈಬರ್ ಕ್ರೈಂಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡಬೇಕೆಂಬ ಒತ್ತಾಯದ ವಿಚಾರವಾಗಿ ಪ್ರತಿಕ್ರಿಯಿಸಿ, ಬ್ಯಾನ್ ಅನ್ನೋ ಶಬ್ದವನ್ನು ಯಾರೂ ಉಪಯೋಗಿಸಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲೂ ಯಾರನ್ನೂ ಬ್ಯಾನ್ ಮಾಡಬಾರದು. ಈ ಹಿಂದೆ ಮಹಿಳೆಯರನ್ನು ಬ್ಯಾನ್ ಮಾಡಿದ್ರು, ಆದರೆ ಬ್ಯಾನ್ ಮಾಡಬಾರದಿತ್ತು. ಕೋರ್ಟ್ ಕೂಡ ಕೆಲಸ ಇಲ್ಲದೇ ಯಾರೂ ಇರಬಾರದು ಅಂತ ಹೇಳುತ್ತೆ. ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು. ಘಟನೆಯನ್ನು ಈಗಾಗಲೇ ನಾವು ಖಂಡಿಸಿದ್ದೇವೆ. ತನಿಖೆ ನಡೆಯುತ್ತಿದೆ ಮತ್ತು ಚಾರ್ಜ್ ಶೀಟ್ ಹಾಕುತ್ತಾರೆ. ಚಾರ್ಜ್​ಶೀಟ್ ಹಾಕಿದ ಮೇಲೆ ಮಾತನಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net