ತಮ್ಮಂದಿರು ನಿಧನರಾದ ವಿಷಯ ದಿಲೀಪ್​ ಕುಮಾರ್​ಗೆ ಇನ್ನೂ ಗೊತ್ತಿಲ್ಲವಂತೆ!

Dilip Kumar - Final
Published on

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಅವರು ಕಳೆದ ಎರಡು ತಿಂಗಳಿನಲ್ಲಿ ಇಬ್ಬರು ಸಹೋದರರನ್ನು ಕರೊನಾದಿಂದಾಗಿ ಕಳೆದುಕೊಂಡಿರುವುದು ಈಗಾಗಲೇ ಸುದ್ದಿಯಾಗಿದೆ. ಆದರೆ, ದಿಲೀಪ್​ ಕುಮಾರ್​ ಅವರಿಗೆ ಈ ವಿಷಯವನ್ನು ಅವರ ಮನೆಯವರಿನ್ನೂ ಹೇಳಿಯೇ ಇಲ್ಲವಂತೆ. ಹಾಗಂತ ಖುದ್ದು ದಿಲೀಪ್​ ಕುಮಾರ್​ ಅವರ ಪತ್ನಿ ಸಾಯಿರಾ ಬಾನು ಈ ವಿಷಯವಾಗಿ ಹೇಳಿಕೊಂಡಿದ್ದಾರೆ.

ದಿಲೀಪ್​ ಕುಮಾರ್​ ಅವರ ಸಹೋದರ ಎಹ್ಸಾನ್​ ಖಾನ್​ ಅವರು ಆಗಸ್ಟ್​ 15ರಂದು ಕರೊನಾಗೆ ಬಲಿಯಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್​ ಎರಡಕ್ಕೆ ದಿಲೀಪ್​ ಅವರ ಇನ್ನೊಬ್ಬ ಸಹೋದರ ಅಸ್ಲಂ ಖಾನ್​ ಸಹ ಕರೊನಾಗೆ ಬಲಿಯಾದರು.

ಕರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಸಹೋದರರನ್ನು ಆಗಸ್ಟ್​ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ನಿಧನರಾಗಿದ್ದರು.

ಆದರೆ, ಈ ವಿಷಯವನ್ನು ದಿಲೀಪ್​ ಕುಮಾರ್​ ಅವರಿಗೆ ಇನ್ನೂ ಹೇಳಿಲ್ಲವಂತೆ. 97 ವರ್ಷ ವಯಸ್ಸಿನ ದಿಲೀಪ್​ ಕುಮಾರ್​ ಅವರು ಈ ವಿಷಯವನ್ನು ಕೇಳಿದರೆ ಆಘಾತಗೊಳ್ಳಬಹುದು ಎಂಬ ಕಾರಣಕ್ಕೆ ಅವರಿಗಿನ್ನೂ ಹೇಳಿಲ್ಲವಂತೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ದಿಲೀಪ್​ ಕುಮಾರ್​ ಅವರ ಪತ್ನಿ ಸಾಯಿರಾ ಬಾನು, 'ದಿಲೀಪ್​ ಕುಮಾರ್​ ಅವರಿಗೆ ಅವರ ಸಹೋದರರ ನಿಧನದ ಬಗ್ಗೆ ಇನ್ನೂ ಏನೂ ಹೇಳಿಲ್ಲ. ಅವರಿಗೆ ನೋವಾಗುವಂತಹ ಯಾವುದೇ ವಿಷಯವನ್ನು ಅವರಿಗೆ ಹೇಳುತ್ತಿಲ್ಲ' ಎಂದು ಅವರು ಹೇಳಿದ್ದಾರೆ.

'ಇತ್ತೀಚೆಗೆ ಅಮಿತಾಭ್​ ಬಚ್ಚನ್​ ಅವರು ಕೋವಿಡ್​ನಿಂದ ನಾನಾವತಿ ಆಸ್ಪತ್ರೆಗೆ ಸೇರಿದ್ದರಲ್ಲ, ಆ ವಿಷಯವನ್ನು ಸಹ ನಾವು ಅವರಿಗೆ ಹೇಳಿರಲಿಲ್ಲ. ಏಕೆಂದರೆ, ಅವರಿಗೆ ಅಮಿತಾಭ್​ ಕಂಡರೆ ಬಹಳ ಇಷ್ಟ. ಹಾಗಾಗಿ ವಿಷಯ ಕೇಳಿ ಅವರು ನೊಂದುಕೊಳ್ಳಬಾರದು ಎಂಬ ಕಾರಣಕ್ಕೆ, ಅವರಿಗೆ ಯಾವುದೇ ಆಘಾತಕಾರಿ ವಿಷಯಗಳನ್ನು ತಿಳಿಸುತ್ತಿಲ್ಲ' ಎಂದು ಸಾಯಿರಾ ಬಾನು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net