ದಿಗಂತ್​ಗೆ ಸಿಕ್ಕ ನಿಧಿ:12 ವರ್ಷಗಳ ನಂತರ ಜತೆಗೆ ಅಭಿನಯ

Nidhi Subbayya
Published on

ಬೆಂಗಳೂರು: ಕಳೆದ ವಾರವಷ್ಟೇ ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಪ್ರಾರಂಭವಾಗಿತ್ತು. ಈಗ ಈ ತಂಡಕ್ಕೆ ನಿಧಿ ಸುಬ್ಬಯ್ಯ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ‘ಪಂಚರಂಗಿ’ ಚಿತ್ರದಲ್ಲಿ ದಿಗಂತ್ ಮತ್ತು ನಿಧಿ ಜತೆಯಾಗಿ ನಟಿಸಿದ್ದರು. ಈಗ 12 ವರ್ಷಗಳ ನಂತರ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದು, ಈಗಾಗಲೇ ಅವರಿಬ್ಬರ ಭಾಗದ ಚಿತ್ರೀಕರಣ ಪ್ರಾರಂಭವಾಗಿದೆ.

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರವನ್ನು ಸಮರ್ಥ್ ಕಡಕೋಳ್ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಅಂಬರೀಷ್ ಮತ್ತು ಸುದೀಪ್ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ನಿರ್ದೇಶಿಸಿದ್ದ ಗುರುದತ್ ಗಾಣಿಗ ಜತೆ ಸೇರಿಕೊಂಡು ಅವರು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ಚಿತ್ರಕ್ಕೆ ನಿಧಿ ಸೇರ್ಪಡೆಯ ಕುರಿತು ಮಾತನಾಡುವ ಗುರುದತ್ ಗಾಣಿಗ, ‘ದಿಗಂತ್​ಗೆ ನಿಧಿ ಜೋಡಿಯಾಗಿ ನಟಿಸುತ್ತಿದ್ದು, ‘ಪಂಚರಂಗಿ’ಯ ಕೆಮಿಸ್ಟ್ರಿ ಇಲ್ಲೂ ಮುಂದುವರಿಯುತ್ತದೆ. ಇದು ಬರೀ ಒಂದು ದಿನದಲ್ಲಿ ನಡೆಯುವ ಕಥೆ. ನಿಧಿ ಮನೆಗೆ ದಿಗಂತ್ ಹೋಗುವಲ್ಲಿಂದ ಚಿತ್ರ ಪ್ರಾರಂಭವಾಗುತ್ತದೆ. ಎಡಚರನೊಬ್ಬ ಬಲಗೈ ಪ್ರಪಂಚಕ್ಕೆ ಕಾಲಿಟ್ಟಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಅಲ್ಲಿಯವರೆಗೂ ಎಡಚರರ ಪ್ರಪಂಚವನ್ನು ತೋರಿಸಲಾಗುತ್ತಿರುತ್ತದೆ. ಅಲ್ಲಿಂದ ಅವನ ಜೀವನದಲ್ಲಿ ಏನೆಲ್ಲಾ ಆಗುತ್ತದೆ, ಏನೆಲ್ಲ ಬದಲಾಗುತ್ತದೆ ಎಂಬುದನ್ನು ತೋರಿಸಲಾಗುತ್ತೆದೆ’ ಎನ್ನುತ್ತಾರೆ.

ಇದೊಂದು ಕಂಟೆಂಟ್ ಸಿನಿಮಾ ಎನ್ನುವ ಗುರುದತ್, ‘ಇದು ನಾಯಕ-ನಾಯಕಿ ಸಿನಿಮಾ ಅಲ್ಲ. ಇಲ್ಲಿ ಕಥೆಯೇ ಹೀರೋ. ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿರುವಂತೆ ಮಾಡಲಾಗಿರುತ್ತದೆ. ಎಡಗೈ ಬಳಕೆದಾರರ ಸಂಖ್ಯೆ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಿಷ್ಟು ತೊಂದರೆಗಳು ಎದುರಾಗುತ್ತವೆ. ಈ ವಿಷಯವನ್ನು ಕ್ರೖೆಮ್ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ’ ಎನ್ನುತ್ತಾರೆ.

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ಇನ್ನೊಬ್ಬ ನಾಯಕಿಯಾಗಿ ಧನು ಹರ್ಷ ಅಭಿನಯಿಸುತ್ತಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ಕೃಷ್ಣ ಹೆಬ್ಬಾಳೆ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net