ಎಂಗೇಜ್​ಮೆಂಟ್​ ಆಗಿದೆಯಾ? ಇಲ್ವಾ? ನಿಜ ಹೇಳಿ... ಅಭಿಮಾನಿ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ವೈರಲ್​! Rashmika Mandanna

Rashmika Mandanna
Published on

ಹೈದರಾಬಾದ್​: ರಶ್ಮಿಕಾ ಮಂದಣ್ಣ ( Rashmika Mandanna ) ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಆಕೆ ಕನ್ನಡತಿಯಾಗಿದ್ದು, ಪ್ಯಾನ್​ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ, ರಶ್ಮಿಕಾ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕೇವಲ ಸಿನಿಮಾ ಕಾರಣಕ್ಕಲ್ಲ, ವ್ಯಯಕ್ತಿಕ ಕಾರಣಕ್ಕೂ ರಶ್ಮಿಕಾ ಸುದ್ದಿಯಾಗುತ್ತಿದ್ದಾರೆ.

ಹೌದು, ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಸಿಕ್ಕಾಪಟ್ಟೆ ವೈರಲ್​ ಆಯಿತು. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ವಿಜಯ್​ ಆಗಲಿ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಅವರಿಬ್ಬರ ಕೈಯಲ್ಲಿ ಇರುವ ರಿಂಗ್​ಗಳು ಮಾತ್ರ ನಿಶ್ಚಿತಾರ್ಥಕ್ಕೆ ಸಾಕ್ಷಿಯಂತಿವೆ. ಇದರ ನಡುವೆ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಅದರಲ್ಲಿ ಅಭಿಮಾನಿಯೊಬ್ಬ ನಿಶ್ಚಿತಾರ್ಥ ಸುದ್ದಿ ಖಚಿತಪಡಿಸುವಂತೆ ರಶ್ಮಿಕಾ ಅವರನ್ನು ಕೇಳಿದ್ದಾನೆ. ಈ ವೇಳೆ ರಶ್ಮಿಕಾ ಏನು ಉತ್ತರ ಕೊಟ್ಟರು ಎಂಬುದನ್ನು ತಿಳಿಯಬೇಕಾದರೆ ಮುಂದೆ ಓದಿ.

ರಶ್ಮಿಕಾ ನಟಿಸಿರುವ ಗರ್ಲ್​ಫ್ರೆಂಡ್​ ಸಿನಿಮಾ ನವೆಂಬರ್​ 7ಕ್ಕೆ ಬಿಡುಗಡೆಯಾಗುತ್ತದೆ. ಈ ಸಿನಿಮಾದ ಟ್ರೈಲರ್​ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಇದೇ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ರಶ್ಮಿಕಾ ಮತ್ತು ಚಿತ್ರದ ನಿರ್ದೇಶಕರು ಸಂವಾದ ಕೂಡ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ, ನಿಮಗೂ ಮತ್ತು ವಿಜಯ್​ ಸರ್​ಗೂ ಎಂಗೇಜ್​ಮೆಂಟ್​ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ನಿಮ್ಮಿಂದ ಸ್ಪಷ್ಟನೆ ಬೇಕು ಎಂದು ಕೇಳುತ್ತಾನೆ. ಅದಕ್ಕೆ ರಶ್ಮಿಕಾ ಅವರು ನಿಮಗೆ ಏನು ಅನಿಸುತ್ತೆ ಅಂತ ಅಭಿಮಾನಿಯನ್ನೇ ಕೇಳುತ್ತಾರೆ. ಅದಕ್ಕೆ ಅಲ್ಲಿದ್ದ ಅಭಿಮಾನಿಗಳೆಲ್ಲ ನಿಜ ಅನಿಸುತ್ತಿದೆ ಎನ್ನುತ್ತಾರೆ. ಅದಕ್ಕೆ ಆಶ್ಚರ್ಯ ಎಂಬಂತೆ ಮುಖಭಾವ ವ್ಯಕ್ತಪಡಿಸುವ ರಶ್ಮಿಕಾ, ಅಭಿಮಾನಿಗಳ ಕೂಗಾಟ ಕೇಳಿ ಜೋರಾಗಿ ನಗುತ್ತಾರೆ.

ನಿಮಗೆಲ್ಲ ಏನು ಹೇಳಲಿ, ಯಾವಾಗ ಹೇಳಬೇಕು ಅನಿಸುತ್ತದೆ ಆಗ ಹೇಳುತ್ತೇನೆ ಎಂದು ರಶ್ಮಿಕಾ ಹೇಳುತ್ತಾರೆ. ಅದಕ್ಕೆ ಅಭಿಮಾನಿಯೊಬ್ಬ ದಯವಿಟ್ಟು ಈಗಲೇ ಹೇಳಿ ಮೇಡಂ ಎನ್ನುತ್ತಾನೆ. ಅದಕ್ಕೆ ರಶ್ಮಿಕಾ, ನಾನು ಹೇಳುವುದಿಲ್ಲ ಎಂದು ಕೈ ಅಲ್ಲಾಡಿಸುತ್ತಾರೆ. ಕೊನೆಯಲ್ಲಿ ನಿಮಗೆಲ್ಲ ಏನು ಅನಿಸುತ್ತಿದೆಯೋ ಅದೇ ಎನ್ನುವ ಮೂಲಕ ಪರೋಕ್ಷವಾಗಿ ಎಂಗೇಜ್​ಮೆಂಟ್​ ಆಗಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಪ್ರಸ್ತುತ ರಶ್ಮಿಕಾರ ವಿಡಿಯೋ ವೈರಲ್​ ಆಗಿದ್ದು, ವಿಜಯ್​ ಜತೆ ಎಂಗೇಜ್​ಮೆಂಟ್​ ಆಗಿರುವುದು ಖಚಿತ ಎಂಬುದನ್ನು ಅಭಿಮಾನಿಗಳು ಮನಗಂಡಿದ್ದಾರೆ. ಇಬ್ಬರು ಎಂಗೇಜ್​ಮೆಂಟ್​ ಆಗಿರುವುದು ಜಗಜ್ಜಾಹೀರಾಗಿದೆ ಆದರೂ ಈ ಜೋಡಿ ಏಕೆ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಡುತ್ತಿದ್ದಾರೆ ಎಂದು ಎಲ್ಲರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಬೆಳಕಿಗೆ ಬರುತ್ತಲೇ ಇತ್ತು. ಇಬ್ಬರೂ ಒಟ್ಟಿಗೆ ರಜಾದಿನವನ್ನು ಆಚರಿಸಿದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ, ಇಬ್ಬರೂ ಒಟ್ಟಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ, ಇಬ್ಬರೂ ತಾವು ಒಂಟಿಯಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ತಮ್ಮ ಸಂಗಾತಿ ಯಾರೆಂದು ಬಹಿರಂಗಪಡಿಸಿರಲಿಲ್ಲ. ಆದರೆ, ಇಬ್ಬರ ನಡೆ-ನುಡಿ ಮಾತ್ರ ಅಭಿಮಾನಿಗಳಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಈ ಹಿಂದೆ ರಶ್ಮಿಕಾ ಅವರು ವಿಜಯ್​ ಅವರ ಮನೆಗೂ ಭೇಟಿ ನೀಡಿದ್ದರು. ಹೀಗಾಗಿ, ಪ್ರೀತಿಯ ವದಂತಿ ಬಲವಾಗಿ ಹರಡಿತ್ತು. ಅಂತಿಮವಾಗಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, 2018 ರಲ್ಲಿ ಬಿಡುಗಡೆಯಾದ ಗೀತ ಗೋವಿಂದಂ ಚಿತ್ರದ ಮೂಲಕ ಇಬ್ಬರ ನಡುವೆ ಪ್ರೀತಿಯ ಮೊಳಕೆ ಚಿಗುರಿತು. ಡಿಯರ್ ಕಾಮ್ರೇಡ್ ಚಿತ್ರದಲ್ಲೂ ಅವರು ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ರಶ್ಮಿಕಾ ನಟನೆಯ ಬಾಲಿವುಡ್​ ಸಿನಿಮಾ ಥಮ್ಮಾ ಒಂದು ವಾರದ ಹಿಂದಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ತೆಲುಗಿನಲ್ಲಿ ಗರ್ಲ್​ಫ್ರೆಂಡ್​ ಚಿತ್ರ ಮುಂದಿನ ವಾರ ಅಂದರೆ, ನವೆಂಬರ್​ 7ರಂದು ತೆರೆಕಾಣಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net