ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ 'ರಾಜಮಾರ್ತಾಂಡ'ದ ಕೆಲಸಗಳು ಕೆಲ ಕಾರಣಗಳಿಂದ ವಿಳಂಬ ಗೊಂಡವು. ಆದರೆ, ನಟ ಚಿರಂಜೀವಿ ಸರ್ಜಾ ನಿಧನರಾದ ಎರಡು ವರ್ಷಗಳ ಬಳಿಕ, ಇದೀಗ ಆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇನ್ನು, ಈ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿರುವ ಹಿನ್ನಲೆ, ಚಿತ್ರತಂಡದಿಂದ ಹೊಸಕೆರೆಹಳ್ಳಿಯಲ್ಲಿರೋ ಶ್ರೀ ವರಸಿದ್ದಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಒಂದು ವಿಶೇಷ ಪೂಜೆ, ಗಣಹೋಮ ಮಾಡಿಸಲಾಯಿತು. ಇನ್ನು, ನಿರ್ದೇಶಕ ರಾಮ್ ನಾರಾಯಣ್ ಹಾಗೂ ನಿರ್ಮಾಪಕ ಶಿವಕುಮಾರ್ ಅವರ ಈ ಚಿತ್ರದ ವಿಶೇಷ ಪೂಜೆಗೆ ಬಂದಿದ್ದ ನಟ ಸುಂದರ್ ರಾಜ್ ಅವರು ಚಿತ್ರತಂಡಕ್ಕೆ ಶುಭಕೋರಿದರು.