

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಚಿತ್ರಗಳ ಆರಂಭ, ಮುಕ್ತಾಯ ಮತ್ತು ಬಿಡುಗಡೆಯ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ, ಧ್ರುವ ಚಿತ್ರಗಳೆಂದರೆ ಮುಹೂರ್ತದಿಂದ ಬಿಡುಗಡೆಯವರೆಗೂ ಮಿನಿಮಮ್ ಮೂರು ವರ್ಷ ಬೇಕು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, ಭಾನುವಾರ ಪ್ರಾರಂಭವಾದ ‘ಮಾರ್ಟಿನ್’ ಚಿತ್ರೀಕರಣ ಡಿಸೆಂಬರ್ನಲ್ಲಿ ಮುಗಿದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್. ‘ಮಾರ್ಟಿನ್’ ಚಿತ್ರದ ಕುರಿತು ಮಾಹಿತಿ ನೀಡುವ ನಿರ್ದೇಶಕ ಎ.ಪಿ. ಅರ್ಜುನ್, ‘ಚಿತ್ರದ ಕೆಲಸ ಸದ್ಯದಲ್ಲೇ ಶುರುವಾಗಲಿದೆ. ಬೆಂಗಳೂರು, ಹೈದರಾಬಾದ್, ಮುಂಬೈ, ಮಲೆಷಿಯಾ, ಇಸ್ತಾನ್ಬುಲ್ನಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ಗೆ ಚಿತ್ರೀಕರಣ ಮುಕ್ತಾಯ. ಚಿತ್ರದ ಬಿಡುಗಡೆ ದಿನಾಂಕವನ್ನೇ ಘೋಷಿಸಬಹುದಿತ್ತು. ಆದರೆ, ಕರೊನಾ ಗೊಂದಲದಿಂದ ಬಿಡುಗಡೆ ದಿನಾಂಕ ಘೋಷಿಸುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ. ಇನ್ನು, ಧ್ರುವ ಇಲ್ಲಿ ಪ್ರೇಮಿಯಾಗಿ, ದೇಶಾಭಿಮಾನಿಯಾಗಿ, ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
‘ದೇಶದ ಯಾವುದೇ ಪ್ರಜೆಯಾಗಲಿ, ಆತ ಏನೇ ಕೆಲಸ ಮಾಡುತ್ತಿರಲಿ, ದೇಶ ಅಂತ ಬಂದಾಗ ಅಭಿಮಾನ ಇದ್ದೇ ಇರುತ್ತದೆ. ಅದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ಪ್ರೇಮಕಥೆಯೂ ಇದೆ, ತಾಯಿ-ಮಗನ ಸೆಂಟಿಮೆಂಟ್ ಸಹ ಇದೆ’ ಎನ್ನುತ್ತಾರೆ ಅವರು. ಈ ಚಿತ್ರದಲ್ಲಿ ಧ್ರುವಗೆ ಹೆಚ್ಚು ಮಾತಿರುವುದಿಲ್ಲವಂತೆ ಮತ್ತು ಅವರು ಉದ್ದುದ್ದ ಡೈಲಾಗ್ಗಳನ್ನು ಹೊಡೆಯುವುದಿಲ್ಲವಂತೆ. ‘ಈ ಚಿತ್ರದಲ್ಲಿ ಮಾತಿಗಿಂತ ನಟನೆ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಹಿಂದಿನ ನಾಲ್ಕು ಸಿನಿಮಾಗಳಲ್ಲಿ ಬಹಳ ಮಾತಿತ್ತು. ಇಲ್ಲಿ ಎಷ್ಟು ಬೇಕೋ ಅಷ್ಟು ಮಾತಾಡುವ ಪಾತ್ರ ಇದು. ತುಂಬ ತೂಕವಾಗಿ ಮಾತನಾಡುವ ಪಾತ್ರವಾದ್ದರಿಂದ ಹೆಚ್ಚು ಮಾತಿರುವುದಿಲ್ಲ’ ಎನ್ನುತ್ತಾರೆ ಧ್ರುವ. ‘ಮಾರ್ಟಿನ್’ ಚಿತ್ರವು ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದರೆ, ಮಣಿಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ.