'ಧೂಮಂ' ಮುಕ್ತಾಯ; ಹೊಂಬಾಳೆ ಫಿಲಂಸ್​ ನಿರ್ಮಾಣದ ಚಿತ್ರಕ್ಕೆ ಕುಂಬಳಕಾಯಿ

Dhoomam - Complete
Published on

ಬೆಂಗಳೂರು: 'ಲೂಸಿಯಾ' ಪವನ್​ ಕುಮಾರ್​, ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ಅವರಿಗಾಗಿ 'ಧೂಮಂ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಕಳೆದ ಅಕ್ಟೋಬರ್​ನಲ್ಲಷ್ಟೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭವಾಗಿತ್ತು. ಅದಾಗಿ ಮೂರು ತಿಂಗಳಲ್ಲಿ ಇದೀಗ ಮುಕ್ತಾಯವಾಗಿದೆ.

ಈ ವಿಷಯವನ್ನು ಸ್ವತಃ ಹೊಂಬಾಳೆ ಫಿಲಂಸ್​ ಸೋಷಿಯಲ್​ ಮೀಡಿಯಾ ಮೂಲಕ ಘೋಷಿಸಿದೆ. ಚಿತ್ರತಂಡದವರೆಲ್ಲ ಇರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದೆ. We'ge got the shots, cut the lights' ಎಂದು ಹೇಳಿಕೊಂಡಿದೆ.

'ಯೂ ರ್ಟನ್​'ನ ತೆಲುಗು ರಿಮೇಕ್​ ಬಳಿಕ 'ಲೂಸಿಯಾ' ಪವನ್​ ಯಾವುದೇ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. ಪುನೀತ್​ ರಾಜಕುಮಾರ್​ ಅಭಿನಯದಲ್ಲಿ 'ದ್ವಿತ್ವ' ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದರೂ, ಪುನೀತ್​ ನಿಧನದಿಂದ ಆ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಆ ಚಿತ್ರವನ್ನು ನಿರ್ಮಿಸಬೇಕಿದ್ದ ಹೊಂಬಾಳೆ ಫಿಲಂಸ್​ಗಾಗಿ 'ಧೂಮಂ' ಚಿತ್ರವನ್ನು ಮಾಡಿಕೊಟ್ಟಿದ್ದಾರೆ.

'ಧೂಮಂ' ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ. ಇದೊಂದು ಮಲಯಾಳಂ ಚಿತ್ರವಾಗಿದ್ದು, ಕನ್ನಡ, ತೆಲುಗು ಮತ್ತು ತಮಿಳಿಗೂ ಡಬ್​ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಹೊಂಬಾಳೆ ಫಿಲಂಸ್​ ಮಲಯಾಳಂ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ಚಿತ್ರದಲ್ಲಿ ಮಲಯಾಳಂನ ಸ್ಟಾರ್​ ನಟ ಫಹಾದ್​ ಫಾಸಿಲ್​ ಮತ್ತು ತಮಿಳಿನ 'ಸೂರರೈ ಪೊಟ್ರು' ಚಿತ್ರದಲ್ಲಿ ನಟಿಸಿರುವ ನಟಿ ಅಪರ್ಣಾ ಬಾಲಮುರಳಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಪ್ರೀತಾ ಜಯರಾಮನ್​ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net