

ಬೆಂಗಳೂರು: ‘ಕೆಂಡ ಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್, ‘ಕಾಲಾ ಪತ್ಥರ್’ ಎಂಬ ಚಿತ್ರದಲ್ಲಿ ಹೀರೋ ಆಗುತ್ತಿರುವುದು ಹಳೆಯ ಸುದ್ದಿ. ಆದರೆ, ಈ ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಕ್ಕಿ ಆ ಚಿತ್ರದ ನಾಯಕನಷ್ಟೇ ಅಲ್ಲ, ನಿರ್ದೇಶಕ ಕೂಡಾ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ವಿಕ್ಕಿ, ‘ಚಿತ್ರವು ಕಳೆದ ವರ್ಷವೇ ಘೋಷಣೆಯಾಗಿತ್ತು. ಆದರೆ, ಕಾರಣಾಂತರಗಳಿಂದ ನಿರ್ವಪಕರು, ನಿರ್ದೇಶಕರು ಬದಲಾಗಿದ್ದಾರೆ.
ನಾನೇ ಹೀರೊ ಆಗಿ ಅಭಿನಯಿಸುವುದರ ಜತೆಗೆ ನಿರ್ದೇಶನ ಮಾಡಿದ್ದೇನೆ. ಈ ಹಿಂದೆ ಸೂರಿ ಅವರ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿತ್ತು. ಈಗ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ. ‘ರಾಮ ರಾಮಾ ರೇ’ ಸತ್ಯಪ್ರಕಾಶ್ ಬರೆದಿರುವ ಗಟ್ಟಿ ಕಥೆಯನ್ನಿಟ್ಟುಕೊಂಡು ಕಮರ್ಷಿಯಲ್ ಚಿತ್ರ ಮಾಡುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ವಿಕ್ಕಿ.
‘ನಿನ್ನ ಸನಿಹಕೆ’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ಧನ್ಯಾ ರಾಮ್ಕುಮಾರ್, ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಫಸ್ಟ್ಲುಕ್ ಭಾನುವಾರ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ‘ಕಾಲಾ ಪತ್ಥರ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನೊಂದು ಫೈಟ್ ಮಾತ್ರ ಬಾಕಿ ಇದೆಯಂತೆ. ಸದ್ಯದಲ್ಲೇ ಅದನ್ನೂ ಮುಗಿಸಿ, ಜೂನ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿ ವಿಕ್ಕಿ ಇದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ನಾಗಭರಣ, ರಾಜೇಶ್ ನಟರಂಗ, ಸಂಪತ್ ಸೇರಿದಂತೆ ಹಲವರು ನಟಿಸಿದ್ದು, ಸುರೇಶ್ ಮತ್ತು ನಾಗರಾಜ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.