

ಧನಂಜಯ್ ಮತ್ತು ರಚಿತಾ ರಾಮ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕಳೆದೊಂದು ತಿಂಗಳಿನಿಂದ ಕೇಳಿ ಬರುತ್ತಲೇ ಇದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಫೋಟೋಶೂಟ್ ಸಹ ಮಿನರ್ವ ಮಿಲ್ನಲ್ಲಿ ಮುಗಿದಿದೆ. ಆದರೆ, ಚಿತ್ರ ಯಾವಾಗ ಶುರು, ವಿಶೇಷತೆ ಏನು ಎಂಬ ಯಾವ ವಿಷಯದ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಇದೀಗ ಚಿತ್ರದ ನಿರ್ಮಾಪಕ ವಿಖ್ಯಾತ್, ಈ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ, ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಮೂರು ಹೆಸರುಗಳು ಚಿತ್ರಕ್ಕೆ ಹೊಂದುವಂತಿದ್ದು, ಈ ಪೈಕಿ ಯಾವುದು ಫೈನಲ್ ಮಾಡುವುದು ಎಂಬ ಜಿಜ್ನಾಸೆ ಚಿತ್ರತಂಡದಲ್ಲಿ ಇದೆ. ಹಾಗಾಗಿ ಪ್ರೊಡಕ್ಷನ್ ನಂ 4ಗೆ ಎಂಬ ಹೆಸರಿನಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದ್ದು, ಸದ್ಯದಲ್ಲೇ ಚಿತ್ರದ ಅಧಿಕೃತ ಟೈಟಲ್ ಪ್ರಕಟಿಸಲಾಗುತ್ತದಂತೆ.
ಇನ್ನು ಚಿತ್ರದ ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್ ಮೊದಲ ವಾರದಿಂದ ಶುರುವಾಗಲಿದೆ. ಇದೊಂದು ಪೀರಿಯಡ್ ಕಥೆಯಾಗಿದ್ದು, 70-80ರ ದಶಕದ ಕಥೆ ಹೇಳುತ್ತದೆಯಂತೆ. ಅದಕ್ಕೆ ಹೊಂದುವಂತಹ ಪರಿಸರ ಆಗುಂಬೆ, ತೀರ್ಥಹಳ್ಳಿ, ಕಾರವಾರ ಮುಂತಾದ ಕಡೆ ಹುಡುಕಲಾಗಿದ್ದು, ಅಲ್ಲೇ ಚಿತ್ರೀಕರಣ ನಡೆಯಲಿದೆ. ಕಲಾ ನಿರ್ದೇಶಕ ಗುಣ, ಈ ಸ್ಥಳಗಳಲ್ಲಿ ವಿಶೇಷವಾದ ಸೆಟ್ ನಿರ್ಮಿಸಲಿದ್ದಾರೆ.
ಇದೊಂದು ಲವ್ ಕಂ ಆಕ್ಷನ್ ಚಿತ್ರವಾಗಿದ್ದು, 'ವಾಡಾ ಚೆನ್ನೈ'ನ ಫ್ಲೇವರ್ ಇರುತ್ತದಂತೆ. ರಚಿತಾ ರಾಮ್ ಒಂದು ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಲಿದ್ದು, ಇದುವರೆಗೂ ಅಂಥದ್ದೊಂದು ಪಾತ್ರವನ್ನು ಕನ್ನಡದಲ್ಲಿ ಯಾರೂ ಮಾಡಿಲ್ಲ ಎನ್ನುತ್ತಾರೆ ವಿಖ್ಯಾತ್. 'ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ರಚಿತಾ ರಾಮ್ ಅವರ ಝಲಕ್ ಈ ಟೀಸರ್ನಲ್ಲಿ ನೋಡಬಹುದಾಗಿದೆ' ಎನ್ನುತ್ತಾರೆ.
'ಪುಷ್ಪಕ ವಿಮಾನ' ಚಿತ್ರದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆಯಲಿದೆ. ರವೀಂದ್ರನಾಥ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಚರಣ್ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.