

ಬೆಂಗಳೂರು: 'ನಾನು ಬಡವ ಅಲ್ಲ. ನಾನು ಈಗ ಶ್ರೀಮಂತ. ನಾನು ಶ್ರೀಮಂತ ಆಗಲಿಕ್ಕೆ ಜನ ಶಕ್ತಿ ತುಂಬಿದ್ದಾರೆ. 'ಬಡವ ರಾಸ್ಕಲ್' ಸಿನಿಮಾ ಮೂಲಕ ಜನ ನನ್ನ ಶ್ರೀಮಂತರನ್ನಾಗಿ ಮಾಡಿದ್ದಾರೆ' ಎಂದು ನಟ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
'ಹೆಡ್ ಬುಷ್' ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಚಿತ್ರದ ಕುರಿತು ಕೇಳಿಬರುತ್ತಿದೆ. ಈ ಎಲ್ಲ ವಿವಾದಗಳಿಂದ ಚಿತ್ರದ ಗಳಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ 'ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ...' ಎಂಬ ಅಭಿಯಾನದ ಜತೆಗೆ 'ಬಡವರ ಮೆನ ಮಕ್ಕಳು ಹೀರೋ ಆಗ್ಬಾರ್ದಾ?' ಎಂಬ ಅಭಿಯಾನ ಪ್ರಾರಂಭವಾಗಿತ್ತು.
ಗುರುವಾರ ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸಂಧಾನ ನಡೆದಿದ್ದು, ಈ ಮೂಲಕ ವಿವಾದ ಬಗೆಹರಿದಿದೆ. ಆಕ್ಷೇಪಾರ್ಹ ಪದಗಳನ್ನು ತೆಗೆಯುವುದಕ್ಕೆ ಧನಂಜಯ್ ಸಹ ಒಪ್ಪಿಕೊಂಡಿದ್ದಾರೆ.
ಸಭಯೆ ನಂತರ 'ಬಡವರ ಮಕ್ಕಳು ಬೇಳಿಬೇಕ್ ಕಣ್ರಯ್ಯ' ಅಭಿಯಾನದ ಕುರಿತು ಮಾತನಾಡಿದ ಅವರು, 'ನಾನು ಬಡವ ಅಲ್ಲ. ನಾನು ಈಗ ಶ್ರೀಮಂತ. ನಾನು ಶ್ರೀಮಂತ ಆಗಲಿಕ್ಕೆ ಜನ ಶಕ್ತಿ ತುಂಬಿದ್ದಾರೆ. 'ಬಡವ ರಾಸ್ಕಲ್' ಸಿನಿಮಾ ಮೂಲಕ ಜನ ನನ್ನ ಶ್ರೀಮಂತರನ್ನಾಗಿ ಮಾಡಿದ್ದಾರೆ. ದುಡ್ಡು ಇರೋರೇ ಫೀಲ್ಡಿಗೆ ಬರಲ್ಲ. ಫ್ಯಾಷನ್ ಇಟ್ಟುಕೊಂಡವರು ಚಿತ್ರರಂಗಕ್ಕೆ ಬರುತ್ತಾರೆ. ಅಂತವರೆಲ್ಲರೂ ಬೆಳೆಯಬೇಕು. ಅವರಿಗೆ ಚಿತ್ರಪ್ರೇಮಿಗಳು ಪ್ರೋತ್ಸಾಹ ಕೊಡಬೇಕು. ಹೀಗಾಗಿ ನಾನು 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಂತ ಹೇಳಿದ್ದೆ. ಈಗ ಅದೇ ಮಾತಿಗೆ ನನ್ನ ಪರವಾಗಿ ಜನ ನಿಂತಿದ್ದಾರೆ. ಎಲ್ಲರ ಪರವಾಗಿಯೂ ಜನ ನಿಲ್ಲಬೇಕು. ನಾನು ನನ್ನ ನಿರ್ಮಾಣ ಸಂಸ್ಥೆಯಲ್ಲಿ ಹೊಸಬರಿಗೆ ಅವಕಾಶ ಕೊಡ್ತೀನಿ ಅಂತ ಹೇಳಿದ್ದೇನೆ. ಕೊಟ್ಟ ಮಾತಿಗೆ ಬದ್ಧನಾಗಿರುತ್ತೇನೆ' ಎಂದು ಹೇಳಿದರು.