

ಅಗ್ನಿ ಶ್ರೀಧರ್ ರವರ ‘ದಾದಾಗಿರಿಯ ದಿನಗಳು’ ಕಾದಂಬರಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಆ ಚಿತ್ರಕ್ಕೆ ಡಾಲಿ ಧನಂಜಯ ನಾಯಕನಾಗಿ ಡಾನ್ ಜಯರಾಜನ ಪಾತ್ರ ನಿರ್ವಹಿಸುತ್ತಿರುವುದೂ ಬಹಿರಂಗವಾಗಿದೆ. ಆದರೆ, ಸಿನಿಮಾ ಶೀರ್ಷಿಕೆ ಏನು ಎಂಬ ಬಗ್ಗೆ ಮಾತ್ರ ಎಲ್ಲಿಯೂ ರಿವೀಲ್ ಆಗಿಲ್ಲ. ಇದೀಗ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಚಿತ್ರದ ಶೀರ್ಷಿಕೆ ಬಹಿರಂಗವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆ.
ಅಂದಹಾಗೆ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಶೀರ್ಷಿಕೆ ‘ಹೆಡ್ ಬುಷ್‘ ಎಂದು ಇಡಲಾಗಿದೆ. ಈ ಚಿತ್ರದ ಪೋಸ್ಟರ್ ಅನ್ನು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
’ಜಯರಾಜ್ ಆಗಿ ನಾನು ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿದ ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು. ಅಶು ಬೇದ್ರ ನಿರ್ಮಾಣ ಹಾಗು ಶೂನ್ಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ’ ಎಂದು ಧನಂಜಯ್ ಟ್ವಿಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಅಂದಹಾಗೆ, ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಕುರಿತಾದ ಚಿತ್ರದಲ್ಲಿ ನಟಿಸುವುದಾಗಿ ಧನಂಜಯ್ ಫೆಬ್ರವರಿಯಲ್ಲೇ ಹೇಳಿಕೊಂಡಿದ್ದರು. ಈ ಕುರಿತು ಒಂದು ಪತ್ರಿಕಾಗೋಷ್ಠಿ ಸಹ ಆಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜುಲೈನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ಚಿತ್ರ ಪ್ರಾರಂಭವಾಗಲಿಲ್ಲ. ಒಂದು ಕಡೆ ಜಯರಾಜ್ ಪಾತ್ರಕ್ಕೆ, ಧನಂಜಯ್ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದರೆ, ಇನ್ನೊಂದು ಕಡೆ ಚಿತ್ರತಂಡವು ಕಥೆ-ಚಿತ್ರಕಥೆ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು.
ಈಗ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳೆಲ್ಲವೂ ಒಂದು ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಶೂನ್ಯ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆಯುತ್ತಿದ್ದಾರೆ. 80ರ ದಶಕದಲ್ಲಿ ಬೆಂಗಳೂರಿನ ಅಂಡರ್ವರ್ಲ್ಡ್ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಾಣವಾಗುತ್ತಿದೆ.