400 ಕೋಟಿ ರೂ. ಮೌಲ್ಯ, ವರ್ಷಕ್ಕೆ__ಕೋಟಿ ಆದಾಯ! ಎನ್ ಕನ್ವೆನ್ಷನ್ ಧ್ವಂಸದಿಂದ ನಾಗಾರ್ಜುನಗೆ ಭಾರಿ ನಷ್ಟ

Nagarajuna N Convention
Published on

ಹೈದರಾಬಾದ್​: ಟಾಲಿವುಡ್​ ಸ್ಟಾರ್ ಹೀರೋ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂಬಂಧಿಸಿದ ಎನ್ ಕನ್ವೆನ್ಷನ್ ಸೆಂಟರ್ ಕೆಡವಿರುವುದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ನಾಗಾರ್ಜುನ ಅವರು ಎನ್ ಕನ್ವೆನ್ಷನ್ ಸೆಂಟರ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದರಿಂದ ಕಟ್ಟಡವನ್ನು ಕೆಡವಲಾಗಿದೆ ಎಂದು ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (ಹೈಡ್ರಾ)ಯ ಅಧಿಕಾರಿಗಳು ತಿಳಿಸಿದ್ದಾರೆ.

ಎನ್​ ಕನ್ವೆನ್ಷನ್​ ಸೆಂಟರ್​ ಅನ್ನು ನೆಲಸಮ ಮಾಡಿದ್ದರಿಂದ ನಾಗಾರ್ಜುನ ಅವರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ. ಕನ್ವೆನ್ಷನ್‌ ಸೆಂಟರ್​ನ ಒಟ್ಟು ಮೌಲ್ಯ 400 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೆ, ವರ್ಷಕ್ಕೆ 100 ಕೋಟಿ ರೂಪಾಯಿ ಆದಾಯವನ್ನು ಈ ಸೆಂಟರ್​ ಮೂಲಕ ಪಡೆಯುತ್ತಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ತುಮ್ಮಿಡಿಕುಂಟ ಕೆರೆಯಲ್ಲಿ ಕೆಲವು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಾಗಾರ್ಜುನ ಅವರು ಈ ಕನ್ವೆನ್ಷನ್ ಸೆಂಟರ್​ ನಿರ್ಮಿಸಿದರು ಎಂಬ ಆರೋಪವಿದೆ. ಈ ಕಾರಣಕ್ಕೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ, ನಾನು ಯಾವುದೇ ಅಕ್ರಮ ಎಸಗಿಲ್ಲ. ಅನುಮತಿ ಪಡೆದೇ ನಿರ್ಮಾಣ ಮಾಡಿದ್ದೆ. ಆದರೆ, ಅಧಿಕಾರಿಗಳು ಕಟ್ಟಡವನ್ನು ಕೆಡವಿದ್ದಾರೆ ಎಂದು ನಾಗಾರ್ಜುನ ಅವರು ಮಾಧ್ಯಮಗಳ ಮುಂದೆ ಅಸಮಧಾನ ಹೊರಹಾಕಿದ್ದಾರೆ. ನಾಗಾರ್ಜುನ್ ಕೂಡ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ನ್ಯಾಯಾಲಯ ಮಧ್ಯಂತರ ಆದೇಶ ನೀಡಿ, ಕಾರ್ಯಾಚರಣೆ ನಿಲ್ಲಿಸಲು ಹೇಳಿದೆ.

ನಗರದ ಅತ್ಯಂತ ದುಬಾರಿ ಪ್ರದೇಶವಾದ ಮಾದಾಪುರದಲ್ಲಿ ಈ ಎನ್ ಕನ್ವೆನ್ಷನ್ ಕಟ್ಟದ ಇತ್ತು. ಮದುವೆ, ಬರ್ತ್‌ಡೇ ಪಾರ್ಟಿ, ಗೆಟ್‌ ಟುಗೆದರ್‌ ಫಂಕ್ಷನ್‌, ಸಿನಿಮಾ ಪ್ರಿ-ರಿಲೀಸ್‌ ಕಾರ್ಯಕ್ರಮಗಳಿಗೆ ಇಲ್ಲಿ ಬುಕ್‌ ಮಾಡಲಾಗುತ್ತಿತ್ತು. ಅತ್ಯಂತ ದುಬಾರಿ ಪ್ರದೇಶದಲ್ಲಿ ಇರುವುದರಿಂದ ಎನ್ ಕನ್ವೆನ್ಷನ್​ ಬಾಡಿಗೆಯೂ ಕೂಡ ಅದೇ ಮಟ್ಟದಲ್ಲಿತ್ತು ಎನ್ನಲಾಗಿದೆ. ಹಾಗೆ ನೋಡಿದರೆ ಒಂದೇ ದಿನಕ್ಕೆ ಲಕ್ಷಗಟ್ಟಲೆ ಬಾಡಿಗೆ ವಸೂಲಿ ಮಾಡುತ್ತಿದ್ದರು.

ನಗರದ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಎನ್ ಕನ್ವೆನ್ಷನ್​ ಸೆಂಟರ್​ನಲ್ಲಿ ಯಾವುದೇ ಆಚರಣೆ ಮಾಡಲು ಉತ್ಸುಕರಾಗಿದ್ದರು. ಏಕೆಂದರೆ, ಎನ್ ಕನ್ವೆನ್ಷನ್ ಪಕ್ಕದಲ್ಲೇ ಸುಂದರವಾದ ಕೊಳವೂ ಇದೆ. ಹೀಗಾಗಿ ಇದು ಅತಿಥಿಗಳನ್ನು ಆಕರ್ಷಿಸುತ್ತದೆ. ನಗರ ಪ್ರದೇಶದಲ್ಲಿ ಮಧ್ಯದಲ್ಲಿ ಇರುವುದರಿಂದ ವಿಳಾಸ ಪತ್ತೆಗೂ ಸುಲಭ. ಹೀಗಾಗಿ ಈ ಎನ್ ಕನ್ವೆನ್ಷನ್​ಗೆ ಭಾರಿ ಬೇಡಿಕೆ ಇತ್ತು.

ಎನ್ ಕನ್ವೆನ್ಷನ್​ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಕುಳಿತು ಸಮಾರಂಭ ವೀಕ್ಷಿಸಲು ಸೌಲಭ್ಯವಿತ್ತು. ಇದು 27 ಸಾವಿರ ಚದರ ಅಡಿ ವಿಸ್ತೀರ್ಣದೊಂದಿಗೆ ಅತ್ಯಂತ ವಿಶಾಲವಾದ ಆವರಣವನ್ನು ಹೊಂದಿದೆ. ಇಲ್ಲಿ ಕಾಲಕಾಲಕ್ಕೆ ಸಿನಿಮಾ ಕಾರ್ಯಕ್ರಮಗಳೂ ನಡೆಯುತ್ತಿದ್ದವು ಮತ್ತು ಸುತ್ತಮುತ್ತಲಿನ ಐಟಿ ಕಂಪನಿಗಳಿಗೆ ಸಂಬಂಧಿಸಿದ ವಿದೇಶಿ ಪ್ರತಿನಿಧಿಗಳ ಸಭೆಗಳು ಮತ್ತು ವಾರ್ಷಿಕ ವರ್ಷಾಚರಣೆಗಳೂ ಇಲ್ಲಿ ನಡೆಯುತ್ತಿದ್ದವು. ಎನ್ ಕನ್ವೆನ್ಷನ್​ ಅನ್ನು ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಇದರ ಬಾಡಿಗೆಯ ವಿಚಾರಕ್ಕೆ ಬಂದರೆ ಒಂದ ದಿನಕ್ಕೆ 5 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಎನ್ನಲಾಗಿದೆ. ಈವೆಂಟ್ ಅನ್ನು ಅವಲಂಬಿಸಿ ಬಾಡಿಗೆಯ ಮೊತ್ತವೂ ಬದಲಾಗುತ್ತಿತ್ತು ಎಂದು ಹೇಳಲಾಗಿದೆ.

ಇನ್ನು ಈ ಘಟನೆಯಿಂದ ನಾಗಾರ್ಜುನ ಅವರು ಸ್ವಲ್ಪ ಸೀರಿಯಸ್ ಆಗಿರುವಂತಿದೆ. ಮತ್ತೊಂದೆಡೆ ಬಿಗ್ ಬಾಸ್ ಶೋನಿಂದ ನಾಗಾರ್ಜುನ ಅವರನ್ನು ತೆಗೆದುಹಾಕಬೇಕು ಎಂಬ ಬೇಡಿಕೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಆದರೆ, ಪದೇ ಪದೇ ನಾಗಾರ್ಜುನ ಅವರನ್ನು ಟಾರ್ಗೆಟ್ ಮಾಡೋದು ಎಷ್ಟು ಸರಿ ಅಂತ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ನಾಗಾರ್ಜುನ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಲು ಸಮಯ ನೀಡಬೇಕು ಎಂಬ ಕಾಮೆಂಟ್‌ಗಳು ವ್ಯಕ್ತವಾಗಿವೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಾಗಾರ್ಜುನ ಅವರು ಸದ್ಯ ಕುಬೇರ ಪ್ರಾಜೆಕ್ಟ್​ನಲ್ಲಿ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net