ಮಹಿಳೆಯ ಉಗುರಿನಲ್ಲೂ ‘ಕೆಜಿಎಫ್​’ ಕ್ರೇಜ್​!

108550-ugsrbcjids-1545309210
Published on

‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ಸದ್ಯ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಸಿನಿಮಾ ಬಿಡುಗಡೆ ಬಗ್ಗೆಯೂ ದಿನಾಂಕ ಘೋಷಣೆ ಆಗಿರುವುದರಿಂದ ಸಹಜ ಕುತೂಹಲ ಮನೆ ಮಾಡಿದೆ. ಹೀಗಿರುವಾಗಲೇ ಅಭಿಮಾನಿ ಬಳಗ ಒಂದಲ್ಲ ಒಂದು ರೀತಿ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದೆ. ಅದರಂತೆ ಇದೀಗ ದೆಹಲಿಯ ನೇಲ್​ ಪಾಲಿಷ್ ಆರ್ಟಿಸ್ಟ್​ವೊಬ್ಬರು ವಿಭಿನ್ನ ರೀತಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಬಗೆಗಿನ ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ. ಉಗುರಿನಲ್ಲಿಯೇ ರಾಕಿಭಾಯ್​ ಫೋಟೋ ಚಿತ್ರಿಸಿಕೊಂಡು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದಿದ್ದಾರೆ.

ಹೌದು, ‘ಕೆಜಿಎಫ್​ ಚಾಪ್ಟರ್ 1’ ಚಿತ್ರದ ಮೊದಲ ಲುಕ್​ ಬಿಡುಗಡೆ ಬಳಿಕ ಜಾಲತಾಣದಲ್ಲಿ ಯಶ್​ ಲುಕ್​ ವೈರಲ್ ಆಗಿತ್ತು. ಟ್ರೇಲರ್ ನೋಡಿ, ಯಶ್​ ಅವರಂತೆ ಗಡ್ಡ ಬಿಟ್ಟು ಫೋಟೋ ಹಂಚಿಕೊಳ್ಳುತ್ತಿದ್ದರು. ಸಿನಿಮಾ ಬಂದ ಮೇಲಂತೂ, ಟಿಕ್​ಟಾಕ್​ನಲ್ಲಿ ‘ಕೆಜಿಎಫ್​’ ಹವಾ ಸೃಷ್ಟಿಸಿತ್ತು. ಅದೇ ರೀತಿ ಚಾಪ್ಟರ್ 2ರ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿರುವುದರಿಂದ ಆ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ಹೊರಹಾಕುತ್ತಿದ್ದಾರೆ.

ದೆಹಲಿ ಮೂಲದ ರಿದಮ್​ ಅಹುಲ್ವಾಲಿಯಾ ತಮ್ಮ ಉಗುರಿನಲ್ಲಿ ನೇಲ್​ ಪಾಲಿಷ್​ ಬಳಸಿ ಯಶ್​ ಚಿತ್ರ ಬಿಡಿಸಿಕೊಂಡು, ಟ್ವಿಟರ್ ಪೇಜ್​ನಲ್ಲಿ ಶೇರ್ ಮಾಡಿದ್ದಾರೆ. ‘ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಯಾರೆಲ್ಲ ಕಾಯುತ್ತಿದ್ದೀರಿ? ಮೊದಲ ಭಾಗದ ನಿರ್ದೇಶನ ಮತ್ತು ಅದು ಮೂಡಿ ಬಂದ ರೀತಿ, ಪ್ರತಿ ದೃಶ್ಯವೂ ಗೂಸ್​ಬಂಪ್ಸ್ ಬರುವಂತಿತ್ತು’ ಎಂದು ಫೋಟೋಗೆ ಕ್ಯಾಪ್ಶನ್​ ನೀಡಿದ್ದಾರೆ.

ಸದ್ಯ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಹಾಡುಗಳ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಕ್ಟೋಬರ್​ 23ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದು, ಶೀಘ್ರದಲ್ಲಿ ಅಭಿಮಾನಿಗಳಿಗೆ ಚಿತ್ರದ ಬಗೆಗಿನ ಮತ್ತಷ್ಟು ಅಪ್​ಡೇಟ್​ ಮಾಹಿತಿ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net