ದೀಪಿಕಾಗೆ ಹುಟ್ಟುಹಬ್ಬದ ಸಂಭ್ರಮ: ಈ ಬಾಲಿವುಡ್ ತಾರೆಯ ಮಸ್ಟ್ ವಾಚ್​ ಮೂವೀಸ್ ಯಾವುದು ಗೊತ್ತ?

Deepika Padukone 5
Published on

ಬಾಲಿವುಡ್​ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ದೀಪಿಕಾ ಪಡುಕೋಣೆ. ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅವರಿಗೆ ಸಾಮಾಜಿಕ ತಾಣಗಳಲ್ಲಿ ಶುಭಾಶಯ, ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

ಕನ್ನಡದವರೇ ಆದ ದೀಪಿಕಾ 2006ರಲ್ಲಿ ಐಶ್ವರ್ಯ ಸಿನಿಮಾ ಮೂಲಕ ವೀಕ್ಷಿಕರಿಗೆ ಪರಿಚಿತರಾದ ಅವರು, ಮುಂದೆ ಬಾಲಿವುಡ್​ನಲ್ಲಿ ಶಾರುಕ್ ಖಾನ್ ನಟನೆಯ ಓಂಶಾಂತಿ ಓಂ ಸಿನಿಮಾದಲ್ಲಿ ಗಮನಸೆಳೆದರು. ಅಲ್ಲಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಅವರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕಳೆದ ವರ್ಷ ನವೆಂಬರ್​ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿರುವ ದೀಪಿಕಾ, 2020ರ ಮೊದಲ ಚಿತ್ರ ಛಾಪಾಕ್ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆಯೇ ಬಹಳ ಸದ್ದು ಮಾಡಿದೆ.
ದೀಪಿಕಾ ನಟನೆಯ ಮಸ್ಟ್ ವಾಚ್​ ಮೂವೀಸ್​ ಪೈಕಿ ಐದನ್ನು ಪಟ್ಟಿ ಮಾಡುವುದಾದರೆ ಈ ಕೆಳಗಿನವುಗಳನ್ನು ಮಾಡಬಹುದು.

ಛಾಪಾಕ್​: ಮೇಘನಾ ಗುಲ್ಜಾರ್ ನಿರ್ದೇಶನ ಈ ಸಿನಿಮಾ ಜನವರಿ 10ರಂದು ಥಿಯೆಟರ್​ಗೆ ಲಗ್ಗೆ ಇಡುತ್ತಿದೆ. ನಿಜ ಜೀವನದ ಕಥೆ ಅದರಲ್ಲೂ ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕಿ ಉಳಿದಿರುವ ಲಕ್ಷ್ಮಿ ಅಗರವಾಲ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದು. ಛಾಪಕ್ ಸಿನಿಮಾದ ನಿರ್ಮಾತೃ ಸ್ವತಃ ದೀಪಿಕಾ ಅವರೇ ಆಗಿದ್ದು, ಚಿತ್ರ ಗೆಲ್ಲುವುದೆಂಬ ಮಹತ್ವಾಕಾಂಕ್ಷೆಯಲ್ಲಿ ಅವರು ಇದ್ದಾರೆ.


ಪದ್ಮಾವತ್​: ಸಂಜಯ್ ಲೀಲಾ ಬನ್ಸಾಲ್​ ಸಿನಿಮಾ

ಇದಾಗಿದ್ದು, ದೀಪಿಕಾಗೆ ವೃತ್ತಿ ಬದುಕಿನಲ್ಲೊಂದು ಸ್ಮರಣೀಯ ಪಾತ್ರ ಒದಗಿಸಿದ ಚಿತ್ರ. ರಜಪೂತ ರಾಣಿ ಪದ್ಮಾವತಿಯ ಪಾತ್ರದಲ್ಲಿ ದೀಪಿಕಾ ನಟಿಸಿದ್ದು, ರಣವೀರ್ ಸಿಂಗ್​ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಉತ್ತಮ ಸಾಥ್ ನೀಡಿದ್ದರು. ಈ ಸಿನಿಮಾ 2018ರ ಜನವರಿ 25ರಂದು ತೆರೆಕಂಡಿತ್ತು.
ಬಾಜಿರಾವ್ ಮಸ್ತಾನಿ: ಸಂಜಯ್ ಲೀಲಾ ಬನ್ಸಾಲಿ ಅವರ ಮತ್ತೊಂದು ಇತ್ರ ಇದಾಗಿದ್ದು, ಮರಾಠ ರಾಜ ಬಾಜೀರಾವ್​ ಮತ್ತು ಆತನ ಎರಡನೇ ಪತ್ನಿ ಮಸ್ತಾನಿಯ ಕಥೆಯನ್ನಾಧರಿಸಿದ ಚಿತ್ರ. ಮಸ್ತಾನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿ ಅಭಿಮಾನಿಗಳ ಮನಗೆದ್ದರೆ, ರಣವೀರ್ ಸಿಂಗ್​ ಅವರು ಬಾಜೀರಾವ್ ಆಗಿ ನಟಿಸಿದ್ದರು. ಈ ಜೋಡಿ ಬಹಳ ಸದ್ದು ಮಾಡಿದ ಸಿನಿಮಾ ಇದಾಗಿದ್ದು, 2015ರ ಡಿಸೆಂಬರ್ 18ರಂದು ತೆರೆಕಂಡಿತ್ತು.
ಪಿಕು: ಶೂರ್ಜಿತ್ ಸರ್ಕಾರ್ ನಿರ್ದೇಶನದ ಸಿನಿಮಾ ಇದಾಗಿದ್ದು, ವಯಸ್ಸಾದ ತಂದೆ ಮತ್ತು ಆತನ ಪುತ್ರಿಯ ಕಥೆಯನ್ನು ಒಳಗೊಂಡಿತ್ತು. ಅಮಿತಾಭ್ ಬಚ್ಚನ್ ತಂದೆಯಾಗಿ, ದೀಪಿಕಾ ಪುತ್ರಿಯಾಗಿ ಕಾಣಿಸಿಕೊಂಡಿದ್ದರು. ಇದು 2015ರ ಮೇ 8ರಂದು ತೆರೆ ಕಂಡಿತ್ತು.
ಯೇ ಜವಾನಿ ಹೇ ದೀವಾನಿ: ಅಯನ್​ ಮುಖರ್ಜಿ ನಿರ್ದೇಶನ ಚಿತ್ರ ಇದಾಗಿದ್ದು, 2013ರಲ್ಲಿ ಅತ್ಯುತ್ತಮ ಮನರಂಜನೆಯನ್ನು ವೀಕ್ಷಕರಿಗೆ ಒದಗಿಸಿತ್ತು. ರಣಬೀರ್ ಕಪೂರ್​ ನಾಯಕನಾಗಿ, ದೀಪಿಕಾ ನಾಯಕಿಯಾಗಿ ನಟಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net