ಶಾರುಖ್​ ‘ಪಠಾಣ್​’ ಚಿತ್ರಕ್ಕೆ ಜಾನ್​ ಅಬ್ರಹಂಗೆ 20 ಕೋಟಿ ಸಂಭಾವನೆ.. ದೀಪಿಕಾಗೆಷ್ಟಿರಬಹುದು?

Deepika
Published on

ಮುಂಬೈ: ಜೀರೋ ಸಿನಿಮಾ ಸೋಲಿನ ಬಳಿಕ ಬೇರಾವ ಸಿನಿಮಾ ಆಯ್ದುಕೊಳ್ಳದ ಶಾರುಖ್​, ಇದೀಗ ಸುದೀರ್ಘ ಎರಡು ವರ್ಷದ ಬಳಿಕ ಪಠಾಣ್​ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಸಾಲು ಸಾಲು ಸೋಲು ಕಂಡು, ಅದರಿಂದ ಕೊಂಚ ಬೇಸರಗೊಂಡಿದ್ದ ಶಾರುಖ್​, ಇದೀಗ ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ. ಇನ್ನೇನು ಶೂಟಿಂಗ್​ ಸಹ ಶುರುವಾಗಲಿದ್ದು, ಜನವರಿ ವೇಳೆಗೆ ದೀಪಿಕಾ, ಪಠಾಣ್​ ತಂಡ ಸೇರಿಕೊಳ್ಳಲಿದ್ದಾರೆ.

ಇದೀಗ ಇದೇ ಚಿತ್ರದ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅದರಲ್ಲೂ ನಟಿ ದೀಪಿಕಾ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿರಬಹುದು ಎಂಬ ಕುತೂಹಲವೂ ಇದೆ. ಇತ್ತೀಚೆಗಷ್ಟೇ ಪ್ರಭಾಸ್​ ಸಿನಿಮಾಕ್ಕೆ 12 ಕೋಟಿ ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಶಾರುಖ್​ ಸಿನಿಮಾಕ್ಕೆ 15 ಕೋಟಿಯ ಬೇಡಿಕೆ ಇಟ್ಟಿದ್ದಾರಂತೆ.

ಈ ತಿಂಗಳಾಂತ್ಯಕ್ಕೆ ಪಠಾಣ್​ ಸಿನಿಮಾ ಸೆಟ್ಟೇರಲಿದೆ. ಸಿದ್ಧಾರ್ಥ್​ ಆನಂದ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ದೀಪಿಕಾ ಜತೆಗೆ ನೆಗೆಟಿವ್​ ಲೀಡ್​ ಆಗಿ ಜಾನ್​ ಅಬ್ರಹಂ ಸಹ ನಟಿಸಲಿದ್ದಾರೆ. ಜಾನ್​ ತಮ್ಮ ಪಾತ್ರಕ್ಕೆ 20 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಅದೇ ರೀತಿ ದೀಪಿಕಾ ಸಹ 14 ರಿಂದ 15 ಕೋಟಿಯ ಬೇಡಿಕೆ ಇಟ್ಟಿದ್ದು, ತಂಡವೂ ನೀಡಲು ಒಪ್ಪಿಕೊಂಡಿದೆಯಂತೆ.

ಶಾರುಖ್​ ಖಾನ್​ ಸಂಭಾವನೆಯನ್ನೂ ಸೇರಿ ಪಠಾಣ್​ ಚಿತ್ರದ ಒಟ್ಟಾರೆ ಬಜೆಟ್​ 200 ಕೋಟಿ. ಪಕ್ಕಾ ಆ್ಯಕ್ಷನ್​ ಸಿನಿಮಾ ಇದಾಗಿರಲಿದ್ದು, 2021ರ ದೀಪಾವಳಿಗೆ ಬಿಡುಗಡೆ ಮಾಡುವುದು ತಮಡದ ಪ್ಲ್ಯಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net