

ನೀನಾಸಂ ಸತೀಶ್ ಅಭಿನಯದ ‘ಡಿಯರ್ ವಿಕ್ರಮ್ ಚಿತ್ರವು ಚಿತ್ರಮಂದಿರಗಳ ಬದಲಾಗಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಯಾಗಲಿದೆ. ಜೂನ್ 30ರಂದು ವೂಟ್ ಸೆಲೆಕ್ಟ್ ನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ. ‘ನನ್ನ ನಾಲ್ಕು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಎಲ್ಲಾ ನಾಲ್ಕು ಚಿತ್ರಗಳನ್ನು ಚಿತ್ರಮಂದಿರಕ್ಕೆ ತರುವುದು ಕಷ್ಟವಾಗುತ್ತದೆ. ಈಗಾಗಲೇ ನಂದೀಶ್ ಈ ಚಿತ್ರಕ್ಕಾಗಿ ಸಾಕಷ್ಟು ಸಾಲ ಮಾಡಿದ್ದಾರೆ. ಜಮೀನು ಅಡಮಾನ ಇಟ್ಟು ಚಿತ್ರಕ್ಕೆ ಖರ್ಚು ಮಾಡಿದ್ದಾರೆ. ಈ ಮಧ್ಯೆ, ವೂಟ್ ಸೆಲೆಕ್ಟ್ ನಿಂದ ಒಳ್ಳೆಯ ಆಫರ್ ಬಂತು. ಇದರಿಂದ ನಿರ್ವಪಕರು ಸಹ ಸೇಫ್ ಆಗುತ್ತಾರೆ ಎನ್ನುವ ಕಾರಣಕ್ಕೆ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸತೀಶ್.
‘ಈ ಚಿತ್ರದ ಮೂಲಕ ಸಮಾಜದಲ್ಲಿರುವ ತಪು್ಪಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಟ್ರೇಲರ್ ನೋಡಿದರೆ ಯಾವುದೋ ಒಂದು ಸಿದ್ಧಾಂತದ ಕುರಿತ ಚಿತ್ರ ಇದು ಎಂದನಿಸಬಹುದು. ಆದರೆ, ಇಲ್ಲಿ ಎಡ-ಬಲ ಇಲ್ಲ. ಇದೊಂದು ಪ್ರೇಮಕಥೆ. ಇಲ್ಲಿ ಪ್ರೀತಿ, ರಾಜಕೀಯ, ಆಕ್ಷನ್ ಎಲ್ಲವೂ ಇದೆ’ ಎನ್ನುತ್ತಾರೆ. ಸತೀಶ್ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಿದ್ದು, ಸೋನು ಗೌಡ, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ.