

ಸಂತೋಷ್ ಆರ್ಯನ್ ಅಭಿನಯದ 'ಡಿಯರ್ ಸತ್ಯ' ಚಿತ್ರದ ಟೀಸರ್ನ್ನು ನಟ ಶಿವರಾಜಕುಮಾರ್ ಅವರು ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ, ಇದೀಗ ಶಿವರಾಜಕುಮಾರ್ ಅವರು ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ 'ನೂರು ಜನ್ಮಕೂ' ಚಿತ್ರದಲ್ಲಿ ಹೀರೋ ಆಗಿದ್ದ ಸಂತೋಷ್, ಆ ನಂತರ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೇಗ್ ಬಂದ' ಎಂಬೆರಡು ರಿಯಾಲಿಟಿ ಶೋಗಳ ನಿರೂಪಕರಾಗಿ, 'ಬಿಗ್ ಬಾಸ್ - 2'ನ ಸ್ಪರ್ಧಿಯಾಗಿದ್ದವರು ಆರ್ಯನ್ ಸಂತೋಷ್. ಈಗ 'ಡಿಯರ್ ಸತ್ಯ'ನಾಗಿ ಹೊಸ ಲುಕ್ ನಲ್ಲಿ ಮತ್ತೆ ಹಾಜರಾಗಿದ್ದಾರೆ.
ಇದನ್ನೂ ಓದಿ: ನೋ ಆದರ್ ವರ್ಕ್, ಸೋ ವರ್ಕ್ಔಟ್ …
ಈ ಚಿತ್ರದ ಕುರಿತು ಮಾತನಾಡುವ ಅವರು, 'ನಾನು ಈ ಹಿಂದೆ ನಟಿಸಿದ ಸಿನಿಮಾಗಳಲ್ಲಿ ನನ್ನನ್ನು ನಾನು ನೋಡಿಕೊಳ್ಳುತ್ತಿದ್ದೆ. ಆದರೆ, ಈ ಸಿನಿಮಾದ ಡಬ್ಬಿಂಗ್ ಮಾಡಬೇಕಾದರೆ ನನಗೆ ಅನ್ನಿಸಿದ್ದು, ಇಲ್ಲಿ ನಾನು ಸತ್ಯನಾಗಿ ಪೂರ್ತಿ ಬದಲಾಗಿದ್ದೇನೆ ಅನ್ನೋದು. ಈ ಚಿತ್ರದಲ್ಲಿ ಸತ್ಯ ಮತ್ತು ರಿವೇಂಜ್ ಸತ್ಯ ಎಂಬ ಎರಡು ಶೇಡ್ ಗಳಿವೆ. ಒಂದರಲ್ಲಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದೇನೆ. ಮತ್ತೊಂದು ಲುಕ್ ಗಾಗಿ ಉದ್ದುದ್ದ ಗಡ್ಡ ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ ಅವರು.
ಈ ಚಿತ್ರದಲ್ಲಿ ಮೊದಲು ಅತುಲ್ ಕುಲಕರ್ಣಿ ನಟಿಸಬೇಕಿತ್ತಂತೆ. 'ಪೊಲೀಸ್ ಪಾತ್ರಕ್ಕೆ ಅತುಲ್ ಕುಲಕರ್ಣಿ ಅವರು ಬರಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆ ಪಾತ್ರವನ್ನು ನಮ್ಮ ಕನ್ನಡದವರೇ ಆದ ಅರವಿಂದ್ ರಾವ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಹಾಗೆಯೇ ನಾಯಕಿಯ ಪಾತ್ರಕ್ಕೆ ತಾನ್ಯ ಹೋಪ್ ಅವರನ್ನು ಕೇಳಿದ್ದೆವು. ಆ ಜಾಗಕ್ಕೆ ಹೊಸಬರಾದ ಅರ್ಚನಾ ಕೊಟ್ಟಿಗೆ ಅವರನ್ನು ಆಯ್ಕೆ ಮಾಡಿಕೊಂಡೆವು. ಈ ಸಿನಿಮಾದಲ್ಲಿ ತಾಯಿ ಮತ್ತು ಮಗನ ಬಾಂಧವ್ಯ ಕಾಡುವಂತೆ ಮೂಡಿಬಂದಿದೆ. ಅರುಣಾ ಬಾಲರಾಜ್ ನನ್ನ ತಾಯಿಯಾಗಿ ನಟಿಸಿದ್ದಾರೆ. ನನ್ನ ಮುಂದಿನ ಚಿತ್ರಗಳಲ್ಲೂ ನೀವೇ ನನ್ನ ತಾಯಿಯಾಗಬೇಕು ಅಂತಾ ಕೇಳಿಕೊಂಡಿದ್ದೇನೆ. ನಮ್ಮಿಬ್ಬರ ಕಾಂಬಿನೇಷನ್ ಅಷ್ಟು ಚೆಂದಗೆ ಮೂಡಿಬಂದಿದೆ. ಏನೆಲ್ಲಾ ಬೇಕೋ ಎಲ್ಲವನ್ನೂ ಡಿಯರ್ ಸತ್ಯ ಪಡೆದುಕೊಂಡಿದ್ದಾನೆ. ಈ ಚಿತ್ರ ನನ್ನ ಕೈಹಿಡಿಯಲಿದೆ ಎನ್ನುವ ಸಂಪೂರ್ಣ ಭರವಸೆ ಇದೆʼಎನ್ನುತ್ತಾರೆ ಸಂತೋಷ್.
ಇದನ್ನೂ ಓದಿ: ಪೃಥ್ವಿ ಹುಟ್ಟುಹಬ್ಬಕ್ಕೆ ‘ಶುಗರ್ಲೆಸ್’ ಗಿಫ್ಟ್ …
ರಾಕ್ ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ಕೂಡಾ ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಜತೆಗೆ ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದೆ. ಈ ಚಿತ್ರವನ್ನು ಶಿವಗಣೇಶ್ ನಿರ್ದೇಶನ ಮಾಡಿದ್ದು, ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
'ಡಿಯರ್ ಸತ್ಯ' ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಶೇ. 90ರಷ್ಟು ಚಿತ್ರೀಕರಣ ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲವನ್ನೂ ಮುಗಿಸಿ ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.