

ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ರೈಡರ್’ ಸಿನಿಮಾ ಬಿಡುಗಡೆಗೆ ಸನಿಹದಲ್ಲಿದೆ. ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಒಂದು ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಡವ್ವ ಡವ್ವ ...’ ಎಂಬ ಈ ಹಾಡು, ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಹಾಡಿನ ಸಾಹಿತ್ಯದಿಂದಲೇ ಪುಳಕಗೊಂಡಿರುವ ನಿಖಿಲ್, ನಮ್ಮ ಎದೆಯಲ್ಲೂ ಇದೀಗ ಢವಢವ ಶುರುವಾಗಿದೆ ಎಂದಿದ್ದಾರೆ.
‘ವೇದಿಕೆ ಮೇಲೆರುತ್ತಿದ್ದಂತೆ ನಮಗೂ ಭಯ ಶುರುವಾಗುತ್ತಿದೆ. ಮಾಡಿರುವ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ, ನಾವು ಅವರಿಗೆ ಬೇಕಾದ ಹಾಗೆ ಸಿನಿಮಾ ಮಾಡಿದ್ದೀವಾ? ಎಂಬ ಪ್ರಶ್ನೆ ಕಾಡುತ್ತದೆ. ಇಂದಿನ ಆರೋಗ್ಯಕರ ಪೈಪೋಟಿಯಲ್ಲಿ ನಮ್ಮನ್ನು ಗುರುತಿಸಬೇಕಾದರೆ, ನಾವು ಶ್ರಮ ಹಾಕಲೇಬೇಕು’ ಎನ್ನುವ ನಿಖಿಲ್, ‘ನನ್ನ ಸಿನಿಮಾದ ಕಥೆ ಹೀಗೆಯೇ ಮೂಡಿಬರಬೇಕು ಎಂದು ‘ಸೀತಾರಾಮ ಕಲ್ಯಾಣ’ ಚಿತ್ರದ ಸಮಯದಲ್ಲಿಯೇ ನಿರ್ದೇಶಕರಿಗೆ ಹೇಳಿದ್ದೆ. ಅದೇ ರೀತಿಯಲ್ಲಿ ಚಿತ್ರ ಮಾಡಿದ್ದಾರೆ’ ಎಂದು ನಿರ್ದೇಶಕ ವಿಜಯಕುಮಾರ್ ಕೊಂಡ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
‘ರೈಡರ್’ ಚಿತ್ರದಲ್ಲಿ ನಿಖಿಲ್ಗೆ ಕಶ್ಮೀರಾ ಪರ್ದೇಸಿ ನಾಯಕಿಯಾಗಿ ನಟಿಸಿದ್ದು, ಇದು ಅವರ ಚೊಚ್ಚಲ ಕನ್ನಡ ಸಿನಿಮಾ. ಇನ್ನುಳಿದಂತೆ ಗರುಡ ರಾಮ್ ಮಂಜು ಪಾವಗಡ, ಅನುಷಾ ರೈ, ಅರ್ಜುನ್ ಗೌಡ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣವಿರುವ ಈ ಚಿತ್ರವನ್ನು ಚಂದ್ರು ಮನೋಹರನ್ ನಿರ್ವಿುಸಿದ್ದಾರೆ.