

David Warner : ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಟಾಲಿವುಡ್ ಸಿನಿಮಾಗಳ ಡೈಲಾಗ್ ಮತ್ತು ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಟಾಲಿವುಡ್ ಸಿನಿ ಅಭಿಮಾನಿಗಳಿಗೆ ತುಂಬಾ ಹತ್ತಿರವಾಗಿರುವ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇದೆ.
ಇದೀಗ ನಟ ನಿತಿನ್ ನಟನೆಯ ರಾಬಿನ್ ಹುಡ್ ಸಿನಿಮಾದಲ್ಲಿ ನಟಿಸುವ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ರಾಬಿನ್ ಹುಡ್ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಡೇವಿಡ್ ವಾರ್ನರ್ ಹೆಲಿಕಾಪ್ಟರ್ನಿಂದ ಕ್ಯಾಂಡಿ ಚೀಪುತ್ತಾ ಕೆಳಗಿಳಿಯುವ ದೃಶ್ಯವನ್ನು ತೋರಿಸಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ಏನೆಂಬುದು ಪ್ರಶ್ನೆಯಾಗೇ ಇದೆ. ಅದಕ್ಕೆ ಉತ್ತರ ಸಿಗಬೇಕೆಂದರೆ, ಸಿನಿಮಾ ಬಿಡುಗಡೆಯಾಗ ಬೇಕು. ಸಿನಿಮಾ ಬಿಡುಗಡೆಯಾಗಬೇಕೆಂದರೆ, ಮಾರ್ಚ್ 28ರವರೆಗೆ ಕಾಯಬೇಕು.
ಅಂದಹಾಗೆ, ಡೇವಿಡ್ ವಾರ್ನರ್, ರಾಬಿನ್ ಹುಡ್ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವುದರಿಂದ ಆಸ್ಟ್ರೇಲಿಯಾದ ನೆಟ್ಟಿಗರು, ಇತರ ಕ್ರಿಕೆಟಿಗರು ಮತ್ತು ಡೇವಿಡ್ ವಾರ್ನರ್ ಅಭಿಮಾನಿಗಳು ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ. ಟ್ರೈಲರ್ನಲ್ಲಿ ವಾರ್ನರ್ ಸ್ಟೈಲಿಶ್ ಲುಕ್ ನೋಡಿ ಫಿದಾ ಆಗಿದ್ದಾರೆ. ಅವರ ಖಡಕ್ ಎಂಟ್ರಿ ರೋಚಕವಾಗಿದ್ದು, ಟ್ರೈಲರ್ನ ಸಣ್ಣ ದೃಶ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಡೇವಿಡ್ ವಾರ್ನರ್ ಕೂಡ ಭಾರಿ ಸದ್ದು ಮಾಡಿದ್ದರು.
ಇನ್ನು ಇದೇ ಸಂದರ್ಭದಲ್ಲಿ, ಈ ಚಿತ್ರಕ್ಕಾಗಿ ಡೇವಿಡ್ ವಾರ್ನರ್ ತೆಗೆದುಕೊಂಡಿರುವ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರಾಬಿನ್ ಹುಡ್ ಚಿತ್ರಕ್ಕಾಗಿ ವಾರ್ನರ್ ಸುಮಾರು ಎರಡೂವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತ ವರದಿಯಲ್ಲ. ಟಾಲಿವುಡ್ ಗಲ್ಲಿಯಲ್ಲಿ ಹೀಗಂತ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಮತ್ತು ಎರಡು ದಿನಗಳ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕಾಗಿ ಚಿತ್ರತಂಡ ಇಷ್ಟೊಂದು ಸಂಭಾವನೆ ನೀಡಿದೆ ಎಂದು ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ರಾಬಿನ್ ಹುಡ್ ಚಿತ್ರದಲ್ಲಿ ಡೇವಿಡ್ ವಾರ್ನರ್ ಪಾತ್ರ ಚೆನ್ನಾಗಿದ್ದರೆ, ಅವರಿಗೆ ಟಾಲಿವುಡ್ನಿಂದ ಖಂಡಿತವಾಗಿಯೂ ಇನ್ನಷ್ಟು ಉತ್ತಮ ಆಫರ್ಗಳು ಸಿಗುವ ನಿರೀಕ್ಷೆಯಿದೆ. ಡೇವಿಡ್ ವಾರ್ನರ್ ಅವರು ಭವಿಷ್ಯದಲ್ಲಿ ಟಾಲಿವುಡ್ನಲ್ಲಿ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)