

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಕ್ಷೇತ್ರದ ಜನರಿಗಾಗಿ ಹಲವಾರು ಸ್ಟಾರ್ ನಟರು ಮುಂದೆ ಬಂದು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟ ದರ್ಶನ್ ಕೂಡ ಅಂಥದ್ದೊಂದು ಉದ್ದೇಶಕ್ಕಾಗಿ ಜೂ. 5ರಂದು ಮೃಗಾಲಯಗಳಲ್ಲಿನ ಪ್ರಾಣಿಗಳ ರಕ್ಷಣೆಗೆ ಮನವಿ ಮಾಡಿ, ದತ್ತು ಪಡೆಯುವಂತೆ ಕೋರಿದ್ದರು. ಅದರಂತೆ ಕೇವಲ ಅವರ ಮನವಿಯ ಹಿನ್ನೆಲೆಯಲ್ಲಿ ದೊಡ್ಡ ಬದಲಾವಣೆಯೇ ನಡೆದುಹೋಗಿದೆ. ಅಲ್ಲಿಂದ ಇಲ್ಲಿಯವರೆಗೂ 3 ಕೋಟಿ ಸನಿಹಕ್ಕೆ ಬಂದು ನಿಂತಿದೆ.
ಹೌದು.. ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಪ್ರಾಣಿಪ್ರಿಯ ದರ್ಶನ್ ಮೃಗಾಲಯದ ಪ್ರಾಣಿಗಳ ಪರವಾಗಿ ದನಿ ಎತ್ತಿದ್ದರು. ಕರೊನಾದ ಕಾರಣದಿಂದಾಗಿ ಮೃಗಾಲಯಕ್ಕೂ ಸಂಕಷ್ಟ ಎದುರಾಗಿದ್ದು, ಪ್ರಾಣಿಗಳ ಬದುಕಿಗೂ ಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಗಳ ಕುರಿತ ಪ್ರೀತಿಯನ್ನು ವ್ಯಕ್ತಪಡಿಸಿ ನೆರವಾಗಬೇಕೆಂದು ವಿಡಿಯೋ ಮೂಲಕ ಕೋರಿಕೊಂಡಿದ್ದರು. ಹಾಗೇ ಕೋರಿದ ಬೆನ್ನಲ್ಲೇ ರಾಜ್ಯದ ಹಲವು ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ಸಾವಿರಾರು ಮಂದಿ ದತ್ತು ಪಡೆದಿದ್ದಾರೆ. ಕೇವಲ 25 ದಿನಗಳಲ್ಲಿ 3 ಕೋಟಿ ಸನಿಹಕ್ಕೆ ಬಂದಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ.
ಕರೊನಾದಿಂದಾಗಿ ಕರ್ನಾಟಕದ 9 ಮೃಗಾಲಯಗಳಿಗೂ ಸಮಸ್ಯೆ ಆಗಿರುವ ಬಗ್ಗೆ ನಟ ದರ್ಶನ ಕಳವಳ ವ್ಯಕ್ತಪಡಿಸಿದ್ದರು. ಪ್ರವಾಸಿಗರು ಬರದೇ ಇರುವುದರಿಂದ ಈ ಮೃಗಾಲಯಗಳಲ್ಲಿರುವ ಒಟ್ಟು 5 ಸಾವಿರ ಪ್ರಾಣಿಗಳಿಗೆ ಕಷ್ಟ ಎದುರಾಗಿದೆ. ಹಾಗಂತ ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಅದಕ್ಕಾಗಿ ವರ್ಷಕ್ಕೊಮ್ಮೆ ಮಾತ್ರ ಹಣ ಕೊಟ್ಟರೆ ಸಾಕು. ಅಲ್ಲದೆ ಆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗಲಿದೆ. ಸಾಧ್ಯವಿರುವ ಎಲ್ಲರೂ ಪ್ರಾಣಿಗಳನ್ನು ದತ್ತು ಪಡೆಯಬೇಕು ಎಂದು ಅವರು ಮೃಗಾಲಯದಲ್ಲಿ ಪ್ರಾಣಿಗಳ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದರು.