

ತಿರುವನಂತಪುರಂ: ಮೋಹನ್ ಲಾಲ್ ಅಭಿನಯದ 'ಮರಕ್ಕರ್ - ಅರಬ್ಬಿಕಡಲಿಂಟೆ ಸಿಂಹಂ' ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಳೆದ ವರ್ಷ ಮಾರ್ಚ್ 20ರಂದು ಚಿತ್ರ ಬಿಡುಗಡೆ ಎಂದು ಘೋಷಣೆಯಾಗಿ, ಲಾಲ್ ಅವರ ಅಭಿಮಾನಿಗಳೆಲ್ಲ ಚಿತ್ರ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾಗ, ಲಾಕ್ಡೌನ್ ಘೋಷಣೆಯಾಯಿತು. ಅದಾಗಿ ಒಂದು ವರ್ಷವಾದರೂ ಚಿತ್ರ ಬಿಡುಗಡೆಯಾಗಲಿಲ್ಲ.
ಇದೀಗ 'ಮರಕ್ಕರ್' ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಓಣಂ ಸಂದರ್ಭದಲ್ಲಿ ಆಗಸ್ಟ್ 12ರಂದು ಚಿತ್ರ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರವು ಕೇರಳದ ಎಲ್ಲ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದ್ದು, ಮೂರು ವಾರಗಳ ಕಾಲ ಬೇರೆ ಯಾವ ಚಿತ್ರಗಳನ್ನೂ ಬಿಡುಗಡೆ ಮಾಡುವಂತಿಲ್ಲ ಎಂಬುದು ವಿಶೇಷ.
ಈ ಕುರಿತು ಕೇರಳ ನಿರ್ಮಾಪಕರ ಮತ್ತು ಪ್ರದರ್ಶಕರ ಸಂಘಗಳ ನಡುವೆ ಮೌಕಿಕ ಒಪ್ಪಂದವಾಗಿದ್ದು, ಮೂರು ವಾರಗಳ ಕಾಲ ಬೇರೆ ಯಾವುದೇ ಚಿತ್ರವೂ ಬಿಡುಗಡೆಯಾಗದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಬೇರೆ ನಿರ್ಮಾಪಕರಿಗೆ ತೊಂದರೆಯಾಗುವುದಿಲ್ಲವಾ? ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, 'ಮರಕ್ಕರ್' ಬಹುಕೋಟಿ ವೆಚ್ಚದ ಚಿತ್ರ. ಮೇಲಾಗಿ, ಒಂದೂವರೆ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ತಡವಾಗಿದ್ದರಿಂದ, ಚಿತ್ರತಂಡದವರಿಗೆ ಸಾಕಷ್ಟು ನಷ್ಟವಾಗಿದೆ. ನಿರ್ಮಾಪಕರನ್ನು ಉಳಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆಯಂತೆ. ಸದ್ಯಕ್ಕೆ ಈ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲವಾದ್ದರಿಂದ, ಚಿತ್ರವು ಮೂರು ವಾರಗಳ ಕಾಲ ಕೇರಳದ ಎಲ್ಲ ಚಿತ್ರಮಂದಿರಗಳಲ್ಲೂ ಅವ್ಯಾಹತವಾಗಿ ಪ್ರದರ್ಶನ ಕಾಣಲಿದೆ.
'ಮರಕ್ಕರ್ - ಅರಬ್ಬಿಕಡಲಿಂಟೆ ಸಿಂಹಂ' ಚಿತ್ರವನ್ನು ಮೋಹನ್ ಲಾಲ್ ಆಪ್ತ ಆಂಟೋನಿ ಪೆರುಂಬವೂರ್ ನಿರ್ಮಿಸಿದ್ದು, ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಲಾಲ್ ಜತೆಗೆ ಅರ್ಜುನ್ ಸರ್ಜಾ, ಮಂಜು ವಾರಿಯರ್, ಸುನೀಲ್ ಶೆಟ್ಟಿ, ಸುಹಾಸಿನಿ, ಕೀರ್ತಿ ಸುರೇಶ್, ನೆಡುಮುಡಿ ವೇಣು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರವು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ಮತ್ತು ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.