More

    ಉತ್ತಮ ಮಳೆಯಿಂದ ಭೂಮಿ ಹಸನು ಚುರುಕು

    ಶಿಕಾರಿಪುರ: ತಾಲೂಕಿನಲ್ಲಿ ಹದಿನೈದು ದಿನಗಳ ಅಂತರದಲ್ಲಿ ಮೂರ‌್ನಾಲ್ಕು ಬಾರಿ ಉತ್ತಮ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ತಾಲೂಕಿನಾದ್ಯಂತ ಕೃಷಿ ಚಟುವಟಿಕೆ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ.

    ಕಳೆದ ವರ್ಷ ಬರಗಾಲದಿಂದಾಗಿ ರೈತರು ಹೈರಣಾಗಿದ್ದರು. ಯುಗಾದಿ ನಂತರ ಹೊಸ ಸಂವತ್ಸರದಲ್ಲಿ ನಿಧಾನವಾಗಿ ತಾಲೂಕಿನಾದ್ಯಂತ ಆಗಾಗ್ಗೆ ಮಳೆಯಾಗುತ್ತಿದ್ದು, ಒಂದು ವಾರದಲ್ಲಿ ಉತ್ತಮ ಮಳೆ ಆಗಿರುವುದು ಸಂತಸ ಹೆಚ್ಚಿಸಿದೆ.
    2023ರಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿ ಶೇ. 60ರಷ್ಟು ಕೊರತೆ ಉಂಟಾಗಿತ್ತು. 2024 ಜನವರಿ ಆರಂಭದಿಂದ ಈವರೆಗೂ ಕೆಲವೊಮ್ಮೆ ಮಳೆಯಾಗಿದೆ. ಮೇ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ತಾಳಗುಂದ ಹೋಬಳಿ ಸೇರಿ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
    ಮಳೆ ಉತ್ತಮವಾಗುವ ನೀರಿಕ್ಷೆಯಿದ್ದರೂ ರೈತರು ಸದ್ಯಕ್ಕೆ ಮೆಕ್ಕೆಜೋಳ ಬಿತ್ತನೆಗೆ ಮುಂದಾಗುವ ಸಾಧ್ಯತೆಯಿಲ್ಲ. ಕಳೆದ ಬಾರಿ ಉತ್ತಮ ಮಳೆ ನೀರಿಕ್ಷೆಯೊಂದಿಗೆ ಒಂದು ಬಾರಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ ಮಳೆಯಿಲ್ಲದೇ, ಕೆಲ ದಿನಗಳ ನಂತರ ಎರಡನೇ ಬಾರಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದ್ದರಿಂದ ರೈತರು ಇನ್ನೂ ಸ್ವಲ್ಪ ಸಮಯ ಕಾದು ನೋಡಬಹುದು.
    ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿದ್ದ ಶಿಕಾರಿಪುರ ತಾಲೂಕಿನಲ್ಲಿ ಈಗ ಶೇ.50ಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಆರ್ಥಿಕ ಬೆಳೆ ಅಡಕೆ ಬಗ್ಗೆ ಆಸಕ್ತಿ ಹೊಂದಿ ರೈತರು ಭತ್ತ ಬೆಳೆ ಕಡಿಮೆ ಮಾಡುತ್ತಿದ್ದಾರೆ. ಭತ್ತದ ಗದ್ದೆಗಳು ತೋಟಗಳಾಗಿ ಬದಲಾಗುತ್ತಿವೆ. ಪ್ರತಿ ವರ್ಷ ತಾಲೂಕಿನಲ್ಲಿ ತೋಟದ ವಿಸ್ತೀರ್ಣ ಹೆಚ್ಚಾಗುತ್ತಿದೆ. ಕಳೆದ ಬಾರಿ ಮಳೆ ಕಡಿಮೆಯಾಗಿ ರೈತರು ಟ್ಯಾಂಕರ್ ಮೂಲಕ ನೀರುಣಿಸಿ ಒಣಗುತ್ತಿದ್ದ ತೋಟಗಳನ್ನು ಉಳಿಸಿಕೊಂಡಿದ್ದರು. ಈಗ ಮಳೆ ಬಂದಿರುವುದು ತುಸು ನೆಮ್ಮದಿ ಮೂಡಿಸಿದೆ.
    ಮೆಕ್ಕೆಜೋಳದ ಜತೆಗೆ ಶುಂಠಿ ನಾಟಿ ಕೆಲಸಕ್ಕೂ ಚಾಲನೆ ದೊರೆತಿದೆ. ಕೆಲ ವರ್ಷಗಳ ಹಿಂದೆ ಕೇರಳ ಮೂಲದವರು ತಾಲೂಕಿನಾದ್ಯಂತ ಶುಂಠಿ ಬೆಳೆ ಬೆಳೆದು ಸ್ಥಳೀಯ ರೈತರು ಶುಂಠಿ ಬೆಳೆಯತ್ತ ಆಕರ್ಷಿತರಾಗುವಂತೆ ಮಾಡಿದ್ದರು. ಈಗ ತಾಲೂಕಿನಲ್ಲಿ ರೈತರು ಶುಂಠಿಯನ್ನು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ.
    ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರಂಭ ಮಳೆ ಚೆನ್ನಾಗಿ ಆಗುತ್ತಿದೆ. ಜನವರಿಯಿಂದ ಮೇವರೆಗೂ 134 ಮಿ.ಮೀ ಮಳೆಯಾಗಿದ್ದು, ಶೇ. 25ರಷ್ಟು ಪ್ರಮಾಣ ಹೆಚ್ಚಿದೆ. ಕೃಷಿ ಚಟುವಟಿಕೆ ಆರಂಭಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ. ಉತ್ತಮ ಮಳೆಯಿಂದ ತರಕಾರಿ ಬೆಳೆಗಳಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಶಿಕಾರಿಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts