

ಬೆಂಗಳೂರು: ದರ್ಶನ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಮಾರ್ಚ್ 11ರಂದು ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಯಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಸೆನ್ಸಾರ್ ಸಹ ಆಗಿದೆ. ಚಿತ್ರವನ್ನು ನೋಡಿರುವ ಸೆನ್ಸಾರ್ ಮಂಡಳಿ ಸದಸ್ಯರು ‘ಯು/ಎ’ ಪ್ರಮಾಣಪತ್ರ ಕೊಟ್ಟು, ಬಿಡುಗಡೆಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾಗುವುದೊಂದೇ ಬಾಕಿ, ಪ್ರೇಕ್ಷಕರು ಕಣ್ತುಂಬಿಕೊಳ್ಳುವುದೊಂದೇ ಬಾಕಿ.
ಸದ್ಯ ‘ರಾಬರ್ಟ್’ ಚಿತ್ರದ ಪ್ರಚಾರದ ಕೆಲಸಗಳು ಬಹಳ ಜೋರಾಗಿ ನಡೆಯುತ್ತಿದೆ. ಈಗಾಗಲೇ ಹೈದರಾಬಾದ್ನಲ್ಲಿ ‘ರಾಬರ್ಟ್’ನ ತೆಲುಗು ಅವತರಣಿಕೆಯ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಅದಾಗಿ ಎರಡನೆಯ ದಿನಕ್ಕೆ ಹುಬ್ಬಳ್ಳಿಯಲ್ಲೂ ಕನ್ನಡ ‘ರಾಬರ್ಟ್’ನ ಕಾರ್ಯಕ್ರಮ ನಡೆದಿದೆ. ಇನ್ನು ಕಳೆದೊಂದು ವಾರದಿಂದ ದರ್ಶನ್ ಸುದ್ದಿವಾಹಿನಿಗಳಲ್ಲಿ ‘ರಾಬರ್ಟ್’ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಚಿತ್ರದ ಪ್ರಚಾರದ ಕುರಿತು ಮಾತನಾಡುವ ಅವರು, ‘ಬರೀ ದುಡ್ಡಿದ್ದರಷ್ಟೇ ಸಿನಿಮಾ ಆಗುವುದಿಲ್ಲ. ಪ್ರಚಾರ ಬಹಳ ಮುಖ್ಯ. ದರ್ಶನ್ ಇದ್ದಾನೆ ಎಂದ ಮಾತ್ರಕ್ಕೆ ಜನ ಬರುವುದಿಲ್ಲ. ನಾವು ಚಿತ್ರದಲ್ಲಿ ಏನು ಮಾಡಿದ್ದೇವೆ ಎಂದು ಹೇಳಬೇಕು. ಆಗ ಜನ ಬರುತ್ತಾರೆ. ಪ್ರಮುಖವಾಗಿ ಚಿತ್ರದ ಪ್ರಚಾರದ ಬಗ್ಗೆ ನಿರ್ವಪಕರಿಗೆ ಮುತುವರ್ಜಿ ಇರಬೇಕು. ಉಮಾಪತಿ ಪ್ಯಾಶನ್ ಇರುವ ನಿರ್ವಪಕರು. ಚಿತ್ರಕ್ಕೆ ದುಡ್ಡು ಹಾಕುತ್ತೇನೆ, ಮನೆಯಲ್ಲಿರುತ್ತೇನೆ ಎಂದು ಹೇಳುವ ಜಾಯಮಾನದವರಲ್ಲ. ಸಿನಿಮಾ ಮಾಡೋದಷ್ಟೇ ಮುಖ್ಯ ಅಲ್ಲ, ಅದನ್ನು ಜನರಿಗೆ ಸರಿಯಾಗಿ ತಲುಪಿಸಬೇಕು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಕಷ್ಟು ಪ್ಲಾನ್ ಮಾಡಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ’ ಎನ್ನುತ್ತಾರೆ ದರ್ಶನ್. ‘ರಾಬರ್ಟ್’ ಚಿತ್ರವು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ 1800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ