

Darshan Bail Cancel : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸಿ ಇಂದು (ಆಗಸ್ಟ್ 14) ಸುಪ್ರೀಂ ಕೋರ್ಟ್ ಆದೇಶಿಸಿದೆ. ತಾವಾಗೇ ಪೊಲೀಸರ ಮುಂದೆ ಶರಣಾಗಲು ದರ್ಶನ್ಗೆ ಒಂದು ದಿನ ಕಾಲಾವಕಾಶ ನೀಡಿದೆ. ಇದರ ನಡುವೆ ದರ್ಶನ್ ಬೆಂಗಳೂರಿನಲ್ಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಹಾಗಾದರೆ, ದರ್ಶನ್ ಎಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಮೂಲಗಳ ಪ್ರಕಾರ ನಟ ದರ್ಶನ್ ತಮಿಳುನಾಡಿನ ಒಂದು ಪ್ರಖ್ಯಾತ ದೇವಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಉಳಿದುಕೊಂಡಿದ್ದ ದರ್ಶನ್ ಇಂದು ತಮಿಳುನಾಡಿನ ಸತ್ಯಮಂಗಲದ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ, ದರ್ಶನ್ ಬೆಂಗಳೂರಿಗೆ ಮಧ್ಯಾಹ್ನದ ವೇಳೆಗೆ ವಾಪಸ್ ಬರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಇನ್ನು ಶುಕ್ರವಾರ (ಆಗಸ್ಟ್ 15, 2025) ಡೆವಿಲ್ ಸಿನಿಮಾದ ಹಾಡೊಂದು ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಸಿದ್ಧತೆ ಕೂಡ ನಡೆಯುತ್ತಿತ್ತು. ಆದರೆ, ದರ್ಶನ್ ಅನುಪಸ್ಥಿತಿಯಲ್ಲಿ ಆ ಕಾರ್ಯಕ್ರಮ ನಡೆಯುತ್ತಾ? ಅಥವಾ ರದ್ದಾಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ. ಜಾಮೀನು ರದ್ದಾದ ಹಿನ್ನೆಲೆಯಲ್ಲಿ, ದರ್ಶನ್ ಅವರನ್ನು ಇಂದು (ಆಗಸ್ಟ್ 14, 2025) ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಅವರು ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದ್ದು, ಇಂದು ರಾತ್ರಿಯೊಳಗೆ ಪರಪ್ಪನ ಅಗ್ರಹಾರ ಜೈಲಿಗೆ ಅಥವಾ ಬಳ್ಳಾರಿ ಜೈಲಿಗೆ ಕಳುಹಿಸಲಾಗುವ ಸಂಭವ ಇದೆ. ಈ ಹಿಂದೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು, ಆದ್ದರಿಂದ ಮತ್ತೆ ಅದೇ ಜೈಲಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
ಇನ್ನು ದರ್ಶನ್ ಅವರು ಶರಣಾಗುವ ನಿಖರವಾದ ಸಮಯ ಮತ್ತು ಸ್ಥಳದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಇಂದು ಸಂಜೆಯೊಳಗೆ ಬೆಂಗಳೂರು ಪೊಲೀಸರಿಗೆ ತಲುಪಲಿದ್ದು, ಆ ನಂತರ ಬಂಧನದ ಕುರಿತು ತೀರ್ಮಾನವಾಗಲಿದೆ.
ಕಳೆದ 7 ತಿಂಗಳಿಂದ ಜಾಮೀನಿನ ಮೇಲೆ ಹೊರಗಡೆ ಇದ್ದ ದರ್ಶನ್ ಮತ್ತೆ ಜೈಲು ಸೇರಬೇಕಾದ ಸನ್ನಿವೇಶ ಎದುರಾಗಿದೆ. ಆರೋಗ್ಯ ನೆಪ ಹೇಳಿ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದ ದರ್ಶನ್ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ದರ್ಶನ್ ಸೇರಿದಂತೆ ಎಲ್ಲ 7 ಆರೋಪಿಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿತು. ಹೈಕೋರ್ಟ್ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಈ ಪ್ರಕರಣ ಬೆಳಗಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್ ಮಾರ್ಕ್ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಜೈಲಿನ ಲಾನ್ನಲ್ಲಿ ಸಿಗರೇಟ್ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.