

ಕರೊನಾ ವೈರಸ್‌ನಿಂದಾಗಿ ಇಡೀ ದೇಶವೇ ಸ್ಥಬ್ಧವಾಗಿದೆ. ಏಪ್ರಿಲ್ 14ರವರೆಗೂ ಎಲ್ಲರೂ ಮನೆಯಲ್ಲಿ ಇರುವಂತೆ ಕೇಂದ್ರ ಸರ್ಕಾರವೇ ಆದೇಶಿಸಿದೆ. ಇದರಿಂದಾಗಿ ಸಾಕಷ್ಟು ಜನ ಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಬಡಜನರು ಊಟ ಇಲ್ಲದೆ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ದರ್ಶನ್ ಸಹ ತಮ್ಮದೇ ರೀತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೆಲ್ಲದರ ಜತೆಗೆ, ಅವರು ಕನ್ನಡಿಗರಿಗೆ ಒಂದು ಸಣ್ಣ ಸಲಹೆಯನ್ನೂ ನೀಡಿದ್ದಾರೆ.
ಶುಕ್ರವಾರ ರಾತ್ರಿ ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಛಿಸುತ್ತೇನೆ. ದಿನನಿತ್ಯ, ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ, ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟೂ, ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು’ ಎಂದು ದರ್ಶನ್ ಬರೆದುಕೊಂಡಿದ್ದಾರೆ.
ಇನ್ನು ದರ್ಶನ್ ಅವರ ಅಭಿಮಾನಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರಿನಲ್ಲಿ ಹಸಿದವರಿಗೆ ಊಟದ ವ್ಯವಸ್ಥೆ ಮಾಡುವುದರ ಜತೆಗೆ ಎರ್ಮಜೆನ್ಸಿಗಾಗಿ ಆ್ಯಂಬುಲೆನ್ಸ್ ಸೌಲಭ್ಯ ಸಹ ಮಾಡಲಾಗಿದೆ. ಕಳೆದೆರೆಡು ದಿನಗಳಿಂದ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಲಾಕ್‌ಡೌನ್ ಮುಗಿಯುವವರೆಗೂ ಇದನ್ನು ಮುಂದುವರೆಸಲು ದರ್ಶನ್ ಅಭಿಮಾನಿಗಳ ಸಂಘ ನಿರ್ಧರಿಸಿದೆ.