

‘ಲವ್ ಮಾಕ್‌ಟೇಲ್’ ಚಿತ್ರದ ತಮ್ಮ ಅಭಿನಯದಿಂದ ಎಲ್ಲರ ಮನ ಗೆದ್ದವರು ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ. ಈ ಜೋಡಿ ಬರೀ ರೀಲ್‌ಗಷ್ಟೇ ಸೀಮಿತವಲ್ಲ, ನಿಜಜೀವನದಲ್ಲೂ ಪ್ರೇಮಿಗಳು. ಈ ಪ್ರೇಮಿಗಳು ಈ ವರ್ಷದ ಕೊನೆಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ. ಹಾಗಂತ ‘ಲವ್ ಮಾಕ್‌ಟೇಲ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಕೃಷ್ಣ ಮತ್ತು ಮಿಲನಾ ಹೇಳಿಕೊಂಡಿದ್ದರು.
ಎಲ್ಲಾ ಸರಿ, ಕೃಷ್ಣ ಮತ್ತು ಮಿಲನಾ ಎಷ್ಟು ವರ್ಷಗಳಿಂದ ಜತೆಯಾಗಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಈ ಪ್ರಶ್ನೆಗೆ ಕೃಷ್ಣ ಇದೀಗ ಉತ್ತರಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅಂದಹಾಗೆ, ಅವರ ಪ್ರೀತಿಗೆ ಈಗ ಆರು ವರ್ಷಗಳ ಹರೆಯ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಆರು ವರ್ಷಗಳಿಂದ ಜತೆಗಿದ್ದೇವೆ. ಈ ಆರು ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೇವೆ. ಮೊದಲ ಐದು ವರ್ಷಗಳಲ್ಲಿ, ಅಂದುಕೊಂಡಿದ್ದೇನೂ ಆಗಲಿಲ್ಲ. ಆದರೆ, ವೈಯಕ್ತಿಕವಾಗಿ ಅವು ನಮ್ಮ ಬದುಕಿನ ಅದ್ಭುತ ದಿನಗಳು. ನಿಜ ಹೇಳಬೇಕೆಂದರೆ, ಅವು ಜೀವನದ ಪಾಠ ಕಲಿಸಿದ ದಿನಗಳು’ ಎಂದು ಕೃಷ್ಣ ಟ್ವೀಟ್ ಮಾಡಿದ್ದಾರೆ.
‘ಲವ್ ಮಾಕ್‌ಟೇಲ್’ ಚಿತ್ರದ ಯಶಸ್ಸಿನ ನಂತರ, ಅದರ ಮುಂದುವರೆದ ಮಾಡುವುದಕ್ಕೆ ಕೃಷ್ಣ ಮತ್ತು ಮಿಲನ ಮುಂದಾಗಿದ್ದು, ಈಗಾಗಲೇ ಚಿತ್ರದ ಕೆಲಸಗಳು ಶುರುವಾಗಿವೆ. ಈಗಾಗಲೇ ಕಥೆ-ಚಿತ್ರಕಥೆ ಬರೆಯುವುದರಲ್ಲಿ ಕೃಷ್ಣ ಮತ್ತು ಮಿಲನ ತೊಡಗಿಸಿಕೊಂಡಿದ್ದು, ಬಹುಶಃ ಲಾಕ್‌ಡೌನ್ ಮುಗಿದ ನಂತರ ‘ಲವ್ ಮಾಕ್‌ಟೇಲ್’ ಚಿತ್ರದ ಎರಡನೆಯ ಭಾಗದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.