ಓಂ ಕ್ಲೈಮ್ಯಾಕ್ಸ್​ ನೋಡಿ ಚಿತ್ರಮಂದಿರದಿಂದ ನಟಿ ಪ್ರೇಮಾ ಓಡಿ ಹೋಗಿದ್ದೇಕೆ?

Om
Published on

ಬೆಂಗಳೂರು: ‘ಓಂ’ ಸಿನಿಮಾ ಇಂದಿಗೆ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳನ್ನು ಪೂರೈಸಿತು. ಇಡೀ ಚಿತ್ರರಂಗ ಆ ಮಾಸ್ಟರ್​ಪೀಸ್​ ಚಿತ್ರವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆ ಫೋಟೋಗಳನ್ನು ಪೋಸ್ಟ್ ಮಾಡುತ್ತ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ಇಂಥ ಸಿನಿಮಾದ ಶೂಟಿಂಗ್​ ಮತ್ತು ಅದು ಬಿಡುಗಡೆಯಾದ ಬಳಿಕ ನಡೆದ ಒಂದಷ್ಟು ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ಪ್ರೇಮಾ.

‘ಶೂಟಿಂಗ್​ ಹಂತದಲ್ಲೇ ಓಂ ಸಿನಿಮಾ ದೊಡ್ಡ ಮಟ್ಟದ ಹೈಪ್​ ಸೃಷ್ಟಿಸಿತ್ತು. ಉಪೇಂದ್ರ ಮತ್ತು ಶಿವಣ್ಣ ಕಾಂಬಿನೇಷನ್​ ಸಿನಿಮಾ ಎಂಬುದು ಒಂದೆಡೆಯಾದರೆ, ರೌಡಿಸಂ ಹಿನ್ನೆಲೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದದ್ದು ಮತ್ತಷ್ಟು ಕುತೂಹಲ ಕೆರಳಿಸಿತ್ತು. ನಿಜವಾದ ರೌಡಿಗಳೇ ಸಿನಿಮಾದಲ್ಲಿ ಬೇಕು ಎಂದು ಖುದ್ದು ರಿಯಲ್​ ರೌಡಿಗಳನ್ನೇ ಭೇಟಿಯಾಗಿ ಅವರಿಂದಲೇ ಸಿನಿಮಾದಲ್ಲಿ ನಟನೆ ಹೊರತೆಗೆಸಿದ್ದರು ಉಪೇಂದ್ರ. ಎಷ್ಟೋ ಸಲ ಅವರ ಆಗಮನಕ್ಕಾಗಿ ಕಾದಿದ್ದೂ ಇದೆ. ಹೀಗೆ ಎಲ್ಲವೂ ಅಚ್ಚರಿ ಎಂಬಂತೆ ಮುಗಿಯುತು.

ಮೇ 19ಕ್ಕೆ ಸಿನಿಮಾ ಬಿಡುಗಡೆ ಘೋಷಣೆ ಆಯಿತು. ಚಿತ್ರದಲ್ಲಿ ನಾಯಕನಿಗೆ ಕಾಟ ಕೊಡುವ ರೀತಿಯಲ್ಲಿ ನಾನು ಕಾಣಿಸಿಕೊಂಡಿದ್ದರಿಂದ ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕದಲ್ಲೇ ನರ್ತಕಿ ಥಿಯೇಟರ್ ಮೆಟ್ಟಿಲೇರಿದ್ದೆ. ಎಲ್ಲೆಂದರಲ್ಲಿ ಜನವೋ ಜನ. ಸಿನಿಮಾ ಶುರುವಾಯಿತು. ಶಿಳ್ಳೆ ಚಪ್ಪಾಳೆಗಳ ಸದ್ದೋ ಸದ್ದು. ನನ್ನ ಪಾತ್ರ ಬಂದಾಗ ಜನ ಹೇಗೆಲ್ಲ ಪ್ರತಿಕ್ರಿಯೆ ಮಾಡುತ್ತಾರೆ ಎಂಬ ಕ್ಯೂರಿಯಾಸಿಟಿಯೂ ನನಗಿತ್ತು. ಇನ್ನೇನು ಕ್ಲೈಮ್ಯಾಕ್ಸ್ ಬಂದೇ ಬಿಡ್ತು. ಎಲ್ಲಿ ನನ್ನನ್ನು ಕಂಡರೆ ಹೊಡೆದುಬಿಡುತ್ತಾರೋ ಎಂಬ ಕಾರಣಕ್ಕೆ ಕ್ಲೈಮ್ಯಾಕ್ಸ್ ನೋಡದೇ ಚಿತ್ರಮಂದಿರದಿಂದ ಕಾಲ್ಕಿತ್ತಿದ್ದೆ. ಅದಾದ ಬಳಿಕ ನಡೆದಿದ್ದೇಲ್ಲವೂ ಇತಿಹಾಸ’ ಎಂದು ಆವತ್ತಿನ ಘಟನೆಯನ್ನು ನೆನೆಯುತ್ತಾರೆ ಪ್ರೇಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net