

ಬೆಂಗಳೂರು: ಒಂದು ಕಡೆ ಖುಷಿ, ಇನ್ನೊಂದು ಕಡೆ ಬೇಸರ. ಒಂದೊಳ್ಳೆಯ ಚಿತ್ರದಲ್ಲಿ ನಟಿಸಿದ ಸಂತೃಪ್ತಿ, ಜತೆಯಲ್ಲಿ ನಟಿಸಿದ ಪುನೀತ್ ರಾಜಕುಮಾರ್ ಇಲ್ಲವಲ್ಲಾ ಎಂಬ ನೋವು. ಹೀಗೆ ಮಿಶ್ರ ಭಾವನೆಯಲ್ಲಿ ಇಂದು ಬಿಡುಗಡೆಯಾಗುತ್ತಿರುವ ‘ದಿ ಲಕ್ಕಿ ಮ್ಯಾನ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ ‘ಡಾರ್ಲಿಂಗ್’ ಕೃಷ್ಣ.
‘ನಾನು ‘ಓ ಮೈ ಕಡವುಳೇ’ ಚಿತ್ರ ನೋಡಿದ್ದೆ. ಆ ಚಿತ್ರ ಮತ್ತು ಪಾತ್ರ ಬಹಳ ಇಷ್ಟವಾಗಿತ್ತು. ಅದರ ರೀಮೇಕ್ನಲ್ಲಿ ನಟಿಸಲು ಅವಕಾಶ ಬಂದಾಗ, ಒಂದೇ ಮೀಟಿಂಗ್ನಲ್ಲಿ ಓಕೆ ಮಾಡಿದೆ. ಇದುವರೆಗೂ ಯಾವ ಚಿತ್ರದಲ್ಲೂ ಈ ತರಹದ ಪಾತ್ರದಲ್ಲಿ ನಟಿಸಿರಲಿಲ್ಲ. ಅಂಥದ್ದೊಂದು ಪಾತ್ರ ಸಿಕ್ಕಿದೆ. ಜತೆಗೆ ಪುನೀತ್ ಸಾರ್ ...’ ಎಂದು ಒಂದು ಕ್ಷಣ ಮೌನವಾಗುತ್ತಾರೆ ಕೃಷ್ಣ. ‘ಪುನೀತ್ ಅವರ ಜತೆ ನಟಿಸಬೇಕು ಎಂದು ಬಹಳಷ್ಟು ಜನ ಕಾಯುತ್ತಿರುತ್ತಾರೆ. ಅವರು ಯಾರ ಸಿನಿಮಾದಲ್ಲೂ ನಟಿಸಿರಲಿಲ್ಲ. ಅಂಥದ್ದರಲ್ಲಿ ನನ್ನ ಸಿನಿಮಾದಲ್ಲಿ ನಟಿಸಿದರು. ಅದು ಅತಿಥಿ ಪಾತ್ರವಲ್ಲ, ಪೂರ್ಣಪ್ರಮಾಣದ ಪಾತ್ರ. ಇಡೀ ಚಿತ್ರದಲ್ಲಿ ಅವರಿರುತ್ತಾರೆ’ ಎಂದು ಮಾಹಿತಿ ಕೊಡುತ್ತಾರೆ. ಪುನೀತ್ ಮತ್ತು ಕೃಷ್ಣ ಅವರ ಗೆಳೆತನ ಹಲವು ವರ್ಷಗಳದ್ದಾದರೂ, ಇಬ್ಬರೂ ಈ ಹಿಂದೆ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದರೂ, ಈ ಚಿತ್ರದಲ್ಲಿ ಪುನೀತ್ ನಟಿಸುತ್ತಾರೆ ಎಂದು ಕೃಷ್ಣಗೆ ಗೊತ್ತಿರಲಿಲ್ಲವಂತೆ. ‘ಸಿನಿಮಾ ಶುರುವಾಗುವ ಮುನ್ನ ಪುನೀತ್ ಅವರನ್ನು ಒಂದೆರಡು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆ. ಈ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅವರೂ ಹೇಳಲಿಲ್ಲ, ನಾನು ಕೇಳಲಿಲ್ಲ. ಅವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗ ಖುಷಿಯಾಗುವುದರ ಜತೆಗೆ, ಒತ್ತಡ ಸಹ ಜಾಸ್ತಿಯಾಯಿತು. ನಾನಿನ್ನೂ ಚೆನ್ನಾಗಿ ನಟಿಸಬೇಕು ಎಂದು ಇನ್ನಷ್ಟು ಶ್ರಮ ಹಾಕಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಕೃಷ್ಣ.
‘ಲಕ್ಕಿ ಮ್ಯಾನ್’ ನೋಡಿದವರೆಲ್ಲರೂ ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರಂತೆ. ‘ನಾನು ಡಬ್ಬಿಂಗ್ ಮಾಡಿದಾಗ ನೋಡಿದೆ. ಆ ನಂತರ ಪೂರ್ತಿ ಚಿತ್ರ ನೋಡಿಲ್ಲ. ಪುನೀತ್ ಅವರ ಪಾತ್ರ ದೊಡ್ಡದಿರುವುದರಿಂದ, ಜನ ಚಿತ್ರವನ್ನು ಇನ್ನಷ್ಟು ಮೆಚ್ಚಬಹುದು ಎಂಬ ನಂಬಿಕೆ ಇದೆ. ಮೂಲ ಚಿತ್ರ ನೋಡಿದಾಗ, ಈ ತರಹವೂ ಕಥೆ ಹೇಳಬಹುದಾ? ಎಂದು ಖುಷಿಯಾಯಿತು. ಅದ್ಭುತವಾದ ಎಳೆ ಇದೆ. ಇನ್ನು, ಹಲವು ಪ್ರತಿಭಾವಂತರನ್ನು ಈ ಚಿತ್ರಕ್ಕಾಗಿ ಸೇರಿಸಲಾಗಿದೆ. ಮನರಂಜನೆ ಗ್ಯಾರಂಟಿ. ಜತೆಗೆ ಸಾಕಷ್ಟು ಎಮೋಷನ್ಗಳು ಸಹ ಇವೆ.’ ಎನ್ನುತ್ತಾರೆ ಕೃಷ್ಣ. ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಕೃಷ್ಣಗೆ ಇಬ್ಬರು ನಾಯಕಿಯರು. ಸಂಗೀತಾ ಶೃಂಗೇರಿ ಮತ್ತು ರೋಶನಿ ಪ್ರಕಾಶ್. ಜತೆಗೆ ಪುನೀತ್, ಸಾಧು ಕೋಕಿಲ, ನಾಗಭೂಷಣ್, ಸುಧಾ ಬೆಳವಾಡಿ ನಟಿಸಿದ್ದು, ಪ್ರಭುದೇವ ಸಹೋದರ ಮತ್ತು ‘ಚಿತ್ರ’ ಖ್ಯಾತಿಯ ನಾಗೇಂದ್ರ ಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಲಕ್ಕಿ ಮ್ಯಾನ್’ ಅಲ್ಲದೆ ಕೃಷ್ಣ ಅಭಿನಯದ ‘ಮಿಸ್ಟರ್ ಬ್ಯಾಚಲರ್’, ‘ದಿಲ್ ಪಸಂದ್’ ಮತ್ತು ‘ಶುಗರ್ ಫ್ಯಾಕ್ಟರಿ’ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇದಲ್ಲದೆ, ‘ಲವ್ ಬರ್ಡ್ಸ್’ ಮತ್ತು ‘ಲವ್ ಮೀ ಆರ್ ಹೇಟ್ ಮೀ’ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ. ಇನ್ನು, ‘ಲವ್ ಮಾಕ್ಟೇಲ್ 2’ ನಂತರ ಕೃಷ್ಣ ಯಾವುದೇ ಚಿತ್ರದ ನಿರ್ದೇಶನಕ್ಕೂ ಕೈಹಾಕಿಲ್ಲ. ಕಾರಣ ಕಥೆ. ಕೃಷ್ಣಗೆ ಒಂದೊಳ್ಳೆಯ ಕಥೆ ಸಿಕ್ಕಿಲ್ಲವಂತೆ. ‘ನಾನೂ ಕಾಯುತ್ತಿದ್ದೇನೆ. ಒಂದೊಳ್ಳೆಯ ಎಳೆ ಹೊಳೆಯುತ್ತಿದ್ದ ಹಾಗೆ ನಿರ್ದೇಶನ ಮಾಡುತ್ತೇನೆ’ ಎನ್ನುತ್ತಾರೆ.