

ಬೆಂಗಳೂರು: ಇನ್ನೂ ‘ಲವ್ ಮಾಕ್ಟೇಲ್’ ಚಿತ್ರದ ಯಶಸ್ಸಿನ ಖುಷಿಯ ಹ್ಯಾಂಗೋವರ್ನಲ್ಲಿರುವ ‘ಡಾರ್ಲಿಂಗ್’ ಕೃಷ್ಣ ಸದ್ಯದಲ್ಲೇ ಮತ್ತೊಂದು ಸಂತೋಷದ ನಿರೀಕ್ಷೆಯಲ್ಲಿದ್ದಾರೆ. ಕೃಷ್ಣ ಅಭಿನಯದ ಇನ್ನೊಂದು ಚಿತ್ರ ‘ಲೋಕಲ್ ಟ್ರೇನ್’, ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆ ಆಗಲಿದೆ.
ತಮ್ಮದೇ ನಾಯಕತ್ವ, ನಿರ್ದೇಶನ ಹಾಗೂ ನಿರ್ವಣದ ‘ಲವ್ ಮಾಕ್ಟೇಲ್’ ಸಿನಿಮಾಗೆ ಸಿಕ್ಕಿರುವ ಉತ್ತಮ ಸ್ಪಂದನೆಯಿಂದ ಉತ್ಸುಕರಾಗಿರುವ ಅವರು ಈ ಚಿತ್ರದ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲದಲ್ಲಿದ್ದಾರೆ.
‘ಸಂಜನಾ ಸಿನಿ ಆರ್ಟ್ಸ್’ ಲಾಂಛನದಲ್ಲಿ ಎಸ್.ಎಚ್.ವಾಳ್ಕೆ ಅವರು ನಿರ್ವಿುಸಿರುವ ಈ ಸಿನಿಮಾದಲ್ಲಿ ‘ಡಾರ್ಲಿಂಗ್’ ಕೃಷ್ಣಗೆ ಜೋಡಿಯಾಗಿ ಮೀನಾಕ್ಷಿ ದೀಕ್ಷಿತ್, ಎಸ್ಟರ್ ನರೋನಾ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಚಿ.ಗುರುದತ್, ಮೈಸೂರು ಗೋಪಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ನಿರ್ಮಾಪಕರೇ ಕಥೆ ಬರೆದಿದ್ದಾರೆ.