30 ದಿನದಲ್ಲಿ ಪ್ರೀತಿಸೋದು ಹೇಗೆ ಗೊತ್ತಾ?

Kannada heroine
Published on

ಬೆಂಗಳೂರು: ‘ಮನೆ ಮಾರಾಟಕ್ಕಿದೆ’ ಸಿನಿಮಾದ ನಂತರ ನಿರ್ವಪಕ ಎಸ್.ವಿ. ಬಾಬು ಸದ್ದಿಲ್ಲದೆ ತೆಲುಗಿನಲ್ಲಿ ಒಂದು ಚಿತ್ರ ಮಾಡಿದ್ದಾರೆ. ಅದೇ ‘30 ರೋಜುಲೋ ಪ್ರೇಮಿಂಚದಾಮ್ ಎಲಾ’(30 ದಿನದಲ್ಲಿ ಪ್ರೀತಿಸೋದು ಹೇಗೆ?). ತೆಲುಗಿನಲ್ಲಿ ಇದವರ ಮೂರನೆಯ ಚಿತ್ರವಾಗಿದ್ದು, ಇದೇ ಯುಗಾದಿಯಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ ಸುಕುಮಾರ್ ಜತೆ ಕೆಲಸ ಮಾಡಿದ್ದ ಮುನ್ನ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅನೂಪ್ ರುಬಿನ್ಸ್ ಸಂಗೀತ ಚಿತ್ರಕ್ಕಿದೆ.

ಈ ಹಿಂದೆ ನಿರೂಪಕರಾಗಿದ್ದ ಪ್ರದೀಪ್ ಮಚಿರಾಜು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಅವರಿಗೆ ಅಮೃತಾ ಜೋಡಿಯಾಗಿದ್ದಾರೆ. ಕಾಲಿವುಡ್​ನಲ್ಲಿ ಈಗಾಗಲೇ ‘ಪೋಕಿರಿ’, ‘ಕಾಲಿ’, ‘ಬಿಗಿಲ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕನ್ನಡತಿ ಅಮೃತಾ ಅಯ್ಯರ್, ‘30 ರೋಜುಲೋ ಪ್ರೇಮಿಂಚದಾಮ್ ಎಲಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಈವರೆಗೂ ನಾನು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರಲಿಲ್ಲ. ಇದೀಗ ಆ ಅವಕಾಶ ‘30 ರೋಜುಲೋ ಪ್ರೇಮಿಂಚದಾಮ್ ಎಲಾ’ ಚಿತ್ರದ ಮೂಲಕ ಸಿಕ್ಕಿದೆ. ಅಷ್ಟೇ ಅಲ್ಲ, ಈ ಚಿತ್ರದ ‘ನೀಲಿ ನೀಲಿ ಆಕಾಶಂ..’ ಸೂಪರ್ ಹಿಟ್ ಆಗಿದೆ. ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರದ ಬಗ್ಗೆ ವಿವರಿಸುತ್ತಾರೆ ಅಮೃತಾ.

ಕನ್ನಡದಲ್ಲಿ ವಿನಯ್ ರಾಜಕುಮಾರ್ ನಟಿಸುತ್ತಿರುವ ‘ಗ್ರಾಮಾಯಣ’ ಸಿನಿಮಾಗೂ ಅಮೃತಾ ಅವರೇ ನಾಯಕಿ. ‘ಈ ಹಿಂದಿನ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ನಟನೆಗೆ ಸ್ಥಳಾವಕಾಶವಿತ್ತು. ಕನ್ನಡದ ‘ಗ್ರಾಮಾಯಣ’ದಲ್ಲೂ ಹೊಸ ರೀತಿಯಲ್ಲಿ ಇರಲಿದ್ದೇನೆ’ ಎನ್ನುತ್ತಾರವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net