ಗೆಳೆಯನ 3ನೇ ಸಿನಿಮಾಗೆ ತಮ್ಮ ಟೈಟಲ್ ಬಿಟ್ಟುಕೊಟ್ಟ ಡಾಲಿ!

Published on
ನಟ ರಾಕ್ಷಸ ಡಾಲಿ ಧನಂಜಯ್ ಅವರು ಸದ್ಯ ಅವರ 'ಬಡವ ರಾಸ್ಕಲ್' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಮೂಲಕ ಡಾಲಿ ಅವರ ಸಿನಿಮಾ ನಿರ್ಮಾಣದ ಕನಸು ಕೂಡಾ ನನಸಾಗಿದೆ. ಇನ್ನು, ಅವರ ಮುಂಬರುವ 'ಹೊಯ್ಸಳ' ಚಿತ್ರದ ಶೂಟಿಂಗ್ ಕೆಲಸದಲ್ಲೂ ಬ್ಯೂಸಿಯಾಗಿದ್ದಾರೆ. ಹೀಗೆ, ಹಲವು ಕಾರಣಗಳಿಗೆ ಸುದ್ದಿಯಲ್ಲಿರುವ ನಟ ಡಾಲಿ, ಈಗ ಹೊಸದೊಂದು ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಡಾಲಿ ಧನಂಜಯ್ ಎರಡು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಫಿಲ್ಮ್ ಚೇಂಬರ್‌ನಲ್ಲಿ ಒಂದು ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರು. ಅದುವೇ 'ಹಿರಣ್ಯ' ಎಂಬ ಟೈಟಲ್. ಡಾಲಿ ಅವರಿಗೆ ಈ ಟೈಟಲ್ ಇಟ್ಟುಕೊಂಡು ಒಂದು ಸಿನಿಮಾ ಮಾಡುವ ಆಸೆ ಇತ್ತಂತೆ. 
ಆದರೆ, ಈಗ ಆ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಾಧ್ಯವಾಗಲ್ಲ. ಯಾಕೆಂದರೆ, ಈ ಟೈಟಲ್ ಅನ್ನು ತಮ್ಮ ಸ್ನೇಹಿತ ನಟ ರಾಜವರ್ಧನ್‌ಗೆ ಬಿಟ್ಟುಕೊಟ್ಟಿದ್ದಾರೆ. ಹೌದು, ಕೆಲ ತಿಂಗಳುಗಳ ಹಿಂದೆ ನಟ ರಾಜವರ್ಧನ್ ಅವರ ಹೊಸದೊಂದು ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿತ್ತು. ನಿರ್ದೇಶಕ ಪ್ರವೀಣ್ ಅವ್ಯುಕ್ತ್ ಅವರು ಒಂದು ಮಾಸ್ ಸ್ಟೋರಿಯೊಂದನ್ನು ನಟ ರಾಜವರ್ಧನ್ ಗೆಂದು ಬರೆದಿದ್ದರಂತೆ. ಈ ಸಿನಿಮಾಗೆ ಸಾಕಷ್ಟು ಹೆಸರುಗಳನ್ನು ಇಟ್ಟರೂ, 'ಹಿರಣ್ಯ' ಎಂಬ ಟೈಟಲ್ ಅವರಿಗೆ ಸೂಕ್ತ ಅನಿಸಿತಂತೆ. ಆದರೆ, ಫಿಲ್ಮ್ ಚೇಂಬರ್‌ನಲ್ಲಿ ವಿಚಾರಿಸಿದಾಗ, ಈಗಾಗಲೇ ಆ ಟೈಟಲ್ ರಿಜಿಸ್ಟರ್ ಆಗಿದೆ ಎನ್ನಲಾಗಿತ್ತು. ಬಳಿಕ ನಟ ಡಾಲಿ ಅವರಿಗೆ ಕೇಳಿದಾಗ, ಡಾಲಿಗೆ ಟೈಟಲ್ ಕೊಡುವ ಇಷ್ಟವಿರಲಿಲ್ಲವಂತೆ.
ಇನ್ನು, ಈ ವಿಷಯದ ಬಗ್ಗೆ ನಟ ರಾಜವರ್ಧನ್ ಬಳಿ ಹೇಳಿದಾಗ, ಅವರು ಡಾಲಿ ಬಳಿ ಕೇಳಿದ್ದರಂತೆ. ನಂತರ, ರಾಜವರ್ಧನ್ ಕೇಳಿದ ಕೂಡಲೇ ಗೆಳೆಯನಿಗಾಗಿ ಟೈಟಲ್ ಬಿಟ್ಟುಕೊಟ್ಟರಂತೆ". ''ಹಿರಣ್ಯ' ಸಿನಿಮಾದ ಕಥೆ ಗ್ಯಾಂಗ್‌ಸ್ಟರ್ ಶೈಲಿಯಲ್ಲಿ ಇರುತ್ತಂತೆ. ಸಸ್ಪೆನ್ಸ್, ಥ್ರಿಲ್ ಕೂಡಾ ಇರುತ್ತಂತೆ''. ಇದೇ, ಫೆಬ್ರವರಿ 16ಕ್ಕೆ ಈ ಸಿನಿಮಾ ಸೆಟ್ಟೇರಲಿದೆಯಂತೆ. ಇನ್ನು ಫೆಬ್ರವರಿ 18 ರಂದು ಚಿತ್ರದ ಟೈಟಲ್ ಪೋಸ್ಟರ್ ಅನ್ನು ರಿವೀಲ್ ಮಾಡಲಾಗುತ್ತೆ. ಡಾಲಿ ಅವರು ಟೈಟಲ್ ಬಿಟ್ಟುಕೊಟ್ಟ ಈ ಸಿನಿಮಾ ಮೇಲೆ, ಈಗ ಇದೇ ಕಾರಣಕ್ಕೆ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲಿಯೂ, ಡಾಲಿ ಅಭಿಮಾನಿಗಳು ಈ ಚಿತ್ರ ಹೇಗಿರಲಿದೆ ಎಂದು ನೋಡಲು ಕಾದು ಕುಳಿತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net