

ಚೆನ್ನೈ: ನಟಿ ನಿತ್ಯಾ ಮೆನನ್ ( Nithya Menon ) ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ತಾಜಾ ಸಂಗತಿ ಏನೆಂದರೆ, ಇತ್ತೀಚಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ದೇಹದ ಕುರಿತು ವೃತ್ತಿಜೀವನದಲ್ಲಿ ಎದುರಿಸಿದ ಅಪಹಾಸ್ಯ ಮತ್ತು ಟೀಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ತೆಲುಗು ಚಿತ್ರವೊಂದರಲ್ಲಿ ನಟಿಸುವಾಗ ಸೆಟ್‌ನಲ್ಲಿ ಯಾರೂ ಅವರ ಗುಂಗುರು ಕೂದಲನ್ನು ಇಷ್ಟಪಡಲಿಲ್ಲವಂತೆ. ನಾನು ಮೊದಲ ದಿನ ಸೆಟ್‌ಗೆ ಬಂದಾಗ ನನ್ನ ಕೂದಲು ನೋಡಿ ಎಲ್ಲರೂ ತುಂಬಾ ವಿಚಿತ್ರವಾಗಿ ನೋಡುತ್ತಿದ್ದರು. ಚೆನ್ನಾಗಿಲ್ಲ ಎಂದರು. ಆದರೆ, ಇಂದು ಎಲ್ಲರು ಗುಂಗುರು ಕೂದಲು ಇಷ್ಟಪಡುತ್ತಾರೆ. ಅಲ್ಲದೆ, ಸಿನಿಮಾ ನಟಿಗೆ ತಕ್ಕಂತೆ ದೇಹವನ್ನು ಮಾರ್ಪಾಡು ಮಾಡಿಕೊಳ್ಳುವಂತೆ ಹೇಳಿದರು. ಆದರೆ ನಾನು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಹೊರತಾಗಿ ನಾನು ಬೇರೇನೂ ಆಗಲು ಸಾಧ್ಯವಿಲ್ಲ. ನಾನು ಎಂದಿಗೂ ಆಗುವುದಿಲ್ಲ ಎಂಬುದು ನನಗೆ ಮನವರಿಕೆಯಾಯಿತು ಎಂದು ನಿತ್ಯಾ ಹೇಳಿದ್ದಾರೆ.
ನಾನು ದಪ್ಪ ಮತ್ತು ಕುಳ್ಳಗಿದ್ದೇನೆ ಎಂದು ಹಲವರು ಅಪಹಾಸ್ಯ ಮಾಡಿದರು. ಅಲ್ಲದೆ, ನನಗೆ ಗುಂಗುರು ಕೂದಲು, ದೊಡ್ಡ ಹುಬ್ಬು ಇದೆ ಎಂದು ಅನೇಕರು ಹೇಳಿದರು. ಯಾರನ್ನಾದರೂ ಅವರ ನೋಟದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಅದು ಅವರ ಕೀಳು ಮನಸ್ಥಿತಿ ಮತ್ತು ಆ ಜನರು ಅದನ್ನೇ ಮಾಡುತ್ತಾರೆ. ಆದರೆ, ನೀವು ಅದರ ಪ್ರಭಾವಕ್ಕೆ ಒಳಗಾಗದಿದ್ದರೆ ಮಾತ್ರ ಅದನ್ನು ಜಯಿಸುವ ಶಕ್ತಿ ನಿಮಗೆ ಇರುತ್ತದೆ. ಯಾರಾದರೂ ನಿಮಗೆ ಸವಾಲು ಹಾಕಿದರೆ, ನಿಮ್ಮನ್ನು ನೀವು ಅದೃಷ್ಟವಂತ ಎಂದು ಪರಿಗಣಿಸಿ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಿತ್ಯಾ ಹೇಳಿದ್ದಾರೆ.
ನಿತ್ಯಾ ಈಗ ‘ಇಡ್ಲಿ ಕಡಾಯಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಿರುಚಿತ್ರಾಂಬಲಂ ನಂತರ ಧನುಷ್-ನಿತ್ಯಾ ಮೆನನ್ ಮತ್ತೆ ಜೋಡಿಯಾಗಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ತಿರುಚಿತ್ರಾಂಬಲಂ ಮೂಲಕ ನಿತ್ಯಾ ಈ ವರ್ಷ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿದ್ದಾರೆ. (ಏಜೆನ್ಸೀಸ್)