

ಬೆಂಗಳೂರು: ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರವು ನಾಳೆ ಮೇ 13 ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕ್ರಿಟಿಕಲ್ ಕೀರ್ತನೆಗಳು’ ಕುರಿತು ಮಾತನಾಡುವ ನಿರ್ದೇಶಕ ಕುಮಾರ್, ‘ನಾನು ಈ ಹಿಂದೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಮಾಡಿದ್ದೆ. ಆ ನಂತರ ಗಂಭೀರವಾದ ವಿಷಯ ತೆಗೆದುಕೊಂಡು ಈ ಚಿತ್ರ ಮಾಡುತ್ತಿದ್ದೇನೆ. ಒಂದು ಸಮೀಕ್ಷೆಯ ಪ್ರಕಾರ, 70ರಷ್ಟು ಯುವಕರು ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತೀ ವರ್ಷ ಬೆಟ್ಟಿಂಗ್ನಿಂದ ಹಣ ಕಳೆದುಕೊಂಡು, ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಎನ್ನುವುದು ಕ್ರೀಡೆ ಅಥವಾ ಮನರಂಜನೆಯಾಗಿ ಉಳಿದಿಲ್ಲ. ಅದೊಂದು ವ್ಯಾಪಾರವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳದೆ ಹಲವರು ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೀವ ಪಣಕ್ಕಿಡುತ್ತಿದ್ದಾರೆ. ಬೆಟ್ಟಿಂಗ್ನಿಂದ ದೂರವಿರಿ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ.
ಈ ಚಿತ್ರದಲ್ಲಿ ನಾಲ್ಕು ವಿಭಿನ್ನ ಟ್ರಾಕ್ಗಳಿದ್ದು, ಗಂಭೀರ ಸಮಸ್ಯೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ತಬಲಾ ನಾಣಿ ಮತ್ತು ಸುಚೇಂದ್ರ ಪ್ರಸಾದ್ ಅವರ ಪಾತ್ರಗಳು ಇಲ್ಲೂ ಮುಂದುವರೆಯಲಿವೆ. ಮಿಕ್ಕಂತೆ ರಾಜೇಶ್ ನಟರಂಗ, ಅಪೂರ್ವ ಭಾರದ್ವಾಜ್, ಯಶ್ ಶೆಟ್ಟಿ, ‘ತರಂಗ’ ವಿಶ್ವ ಮುಂತಾದವರು ನಟಿಸಿದ್ದಾರೆ.